ವೀರಾಜಪೇಟೆ, ನ. ೨೯: ಸೇವೆ ಮಾಡಲು ಹಲವಾರು ಮಾರ್ಗಗಳಿವೆ. ಎಲ್ಲಿ ನಿಸ್ವಾರ್ಥ ಸೇವೆ ಇರುತ್ತದೆ ಅಲ್ಲಿ ಮನಶಾಂತಿ ನೆಮ್ಮದಿ ಇರುತ್ತದೆ. ದಿನಕ್ಕೊಂದು ಗಂಟೆಯಾದರೂ ಸಮಾಜ ಸೇವೆಗೆ ಮೀಸಲಿಡಿ ಎಂದು ಆರ್‌ಎಸ್‌ಎಸ್‌ನ ಸೇವಾಭಾರತಿ ಸಂಸ್ಥೆಯ ವೀರಾಜಪೇಟೆ ತಾಲೂಕು ಸಂಯೋಜಕ ಬಿ.ವಿ. ಹೇಮಂತ್ ಹೇಳಿದರು.

ವೀರಾಜಪೇಟೆ ಕೊಡವ ಸಮಾಜದಲ್ಲಿ ಪೊಮ್ಮಕ್ಕಡ ಒಕ್ಕೂಟದಿಂದ ಕೊರೊನಾ ವಾರಿರ‍್ಸ್ಗಳಿಗೆ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಮಾನವನಿಗೆ ಪ್ರಾಣ ಎಷ್ಟು ಮುಖ್ಯವೋ ಅಷ್ಟೆ ಸಮಾಜ ಸೇವೆಯು ಮುಖ್ಯವಾಗುತ್ತದೆ. ಸೇವೆ ಮಾಡುವ ಮನೋಭಾವನೆ ಎಲ್ಲರಲ್ಲೂ ಇರುತ್ತದೆ. ನಮ್ಮನ್ನು ನಾವು ಸಮಾಜ ಮುಖಿಯಾಗಿ ತೊಡಗಿಸಿಕೊಳ್ಳಬೇಕು. ಸೇವೆ ಮಾಡಿದರೆ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ಹೇಳಿದರು.

ಪೂಮಾಲೆ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಸೇವೆಗೆ ಯಾವುದೇ ಜಾತಿ ಧರ್ಮಗಳಿಲ್ಲ. ಎಲ್ಲಿ ನಿಸ್ವಾರ್ಥ ಸೇವೆಗಳಿರುತ್ತವೆ ಅಲ್ಲಿ ನಾನು ಎನ್ನುವುದು ಇರುವುದಿಲ್ಲ. ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ಎಲೆಮರೆ ಕಾಯಿಯಂತಿರುವ ಅದೆಷ್ಟೋ ಜನರು ನಮ್ಮೊಂದಿಗೆ ಇದ್ದಾರೆ. ಕೊರೊನಾ ಪರಿಸ್ಥಿತಿ ಜೀವನವನ್ನು ಬದಲಾವಣೆ ಮಾಡಿದೆ. ಹಣ ಅಂತಸ್ತು, ಘನತೆ ಗೌರವ ಎಷ್ಟೇ ಇದ್ದರೂ ಭೂಮಿಯಲ್ಲಿ ಯಾರು ಶಾಶ್ವತ ಅಲ್ಲ. ಎಲ್ಲಾರು ಒಂದೇ ಎನ್ನುವ ಸಮಾನತೆಯನ್ನು ಕೊರೊನಾ ತೋರಿಸಿ ಕೊಟ್ಟಿದೆ ಎಂದು ಅಭಿಪ್ರಾಯಿಸಿದರು. ಜಿ.ಪಂ. ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಮಾತನಾಡಿದರು.

ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂಧರ್ಭದಲ್ಲಿ ಸೇವಾಭಾರತಿ ಸಂಸ್ಥೆಯ ಕೊರೊನಾ ವಾರಿರ‍್ಸ್ಗಳಾದ ಬಿ.ವಿ ಹೇಮಂತ್, ವಿವೇಕ್‌ರೈ, ಚೇಂದ್ರಿಮಾಡ ಸುಬ್ರಮಣಿ, ಅರುಣ್, ರದೀಶ್, ಜಿಷ್ಣು, ಪೂಮಾಲೆ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಇವರುಗಳನ್ನು ಸನ್ಮಾನಿಸಲಾಯಿತು. ಪೊಮ್ಮಕ್ಕಡ ಒಕ್ಕೂಟದ ಸಲಹೆಗಾರ್ತಿ ಕುಪ್ಪಂಡ ಪುಷ್ಪಾ ಮುತ್ತಣ್ಣ, ಖಜಾಂಚಿ ಬಾನು ಭೀಮಯ್ಯ, ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ ಉಪಸ್ಥಿತರಿದ್ದರು.