ಸೋಮವಾರಪೇಟೆ, ನ.೨೯: ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಯೋರ್ವಳ ಮೇಲೆ ವಿನಾಕಾರಣ ಕತ್ತಿಯಿಂದ ಹಲ್ಲೆ ನಡೆಸಿದ ಆರೋಪಿ, ಈಗಲೂ ಗ್ರಾಮದಲ್ಲಿ ಕತ್ತಿಯೊಂದಿಗೆ ತಿರುಗಾಡುತ್ತಿದ್ದರೆ, ಇತ್ತ ತೀವ್ರ ಹಲ್ಲೆಗೊಳಗಾಗಿ ಜೀವನ್ಮರಣ ಸ್ಥಿತಿಗೆ ತಲುಪಿದ್ದ ಬಾಲಕಿ ಹಾಸಿಗೆಯಲ್ಲಿ ನರಳಾಡುತ್ತಿದ್ದಾಳೆ.

ಸುಂಟಿಕೊಪ್ಪ ಪೊಲೀಸ್ ಠಾಣೆಯ ಕೆಲ ಸಿಬ್ಬಂದಿಗಳ ಕೃಪಾಕಟಾಕ್ಷದಿಂದ ಆರೋಪಿ ಇಂದಿಗೂ ಗ್ರಾಮದಲ್ಲಿ ರಾಜಾ ರೋಷವಾಗಿ ಓಡಾಡಿಕೊಂಡಿದ್ದು, ಹಾಸಿಗೆಯಲ್ಲಿ ನರಳುತ್ತಿರುವ ಮುಗ್ಧೆಯ ನೆರವಿಗೆ ಯಾವುದೇ ಕಾನೂನು, ಸಂಘಸAಸ್ಥೆಗಳು ಬಾರದ ಹಿನ್ನೆಲೆ ಬದುಕು ಮತ್ತಷ್ಟು ದುಸ್ತರವಾಗಿದೆ.

ತಾಲೂಕಿನ ಹೊಸತೋಟ ಸಮೀಪದ ಗರಗಂದೂರು ಬಿ ಗ್ರಾಮದಲ್ಲಿ ನ.೧ರಂದು ಇಂತಹದ್ದೊAದು ಅಮಾನವೀಯ ಕೃತ್ಯ ನಡೆದಿದ್ದು, ಹಲ್ಲೆಗೊಳಗಾದ ವಿದ್ಯಾರ್ಥಿನಿ ಇಂದಿಗೂ ನಿತ್ರಾಣ ಸ್ಥಿತಿಯಲ್ಲಿದ್ದಾಳೆ. ಅತ್ತ ಶಾಲೆಗೂ ತೆರಳಲಾಗದೆ ಮನೆಯಲ್ಲಿಯೇ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ತ ಆರೋಪಿ ಪೊಲೀಸ್ ಇಲಾಖೆಯ ಕೃಪಾಕಟಾಕ್ಷದಿಂದ ಘಟನೆ ನಡೆದ ದಿನವೇ ಬಿಡುಗಡೆಗೊಂಡು ರಾಜಾರೋಷವಾಗಿ ಗ್ರಾಮದಲ್ಲಿ ಕತ್ತಿ ಹಿಡಿದುಕೊಂಡೇ ತಿರುಗಾಡುತ್ತಿದ್ದು, ಶಾಲೆಗೆ ತೆರಳುವ ಮಕ್ಕಳು ಭಯದಿಂದ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಏನಿದು ಪ್ರಕರಣ?: ಗರಗಂದೂರು ಗ್ರಾಮದ ಕೂಲಿ ಕಾರ್ಮಿಕ ರಾಮು ವೆನಿಲಾ ದಂಪತಿ ಪುತ್ರಿ, ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ನವೆಂಬರ್ ೧ ರ ಸಂಜೆ ೪.೧೫ರ ಸುಮಾರಿಗೆ ಮನೆಯ ಸಮೀಪ ತಳ್ಳುಗಾಡಿಯಲ್ಲಿ ಬರುವ ದಿನಸಿ ವಸ್ತುಗಳನ್ನು ಖರೀದಿಸಲು ರಸ್ತೆಗೆ ಬಂದಿದ್ದಾಳೆ.

ಈ ಸಂದರ್ಭ ಅದೇ ದಾರಿಗಾಗಿ ಕತ್ತಿ ಹಿಡಿದುಕೊಂಡು ಬರುತ್ತಿದ್ದ ಗ್ರಾಮದ ರಮೇಶ ಎಂಬಾತ ಯಾವುದೇ ಕಾರಣವಿಲ್ಲದೆ ವಿದ್ಯಾರ್ಥಿನಿಯ ಮೊಣಕೈ, ಕುತ್ತಿಗೆಯ ಹಿಂಭಾಗ ಹಾಗೂ ತಲೆಯ ಭಾಗಕ್ಕೆ ಪ್ರಹಾರ ನಡೆಸಿದ್ದಾನೆ.

ದಿಢೀರಾಗಿ ನಡೆದ ಘಟನೆ ಯಿಂದ ಸ್ಥಳೀಯರು ವಿಚಲಿತ ರಾಗಿದ್ದು, ತೀವ್ರವಾಗಿ ಗಾಯ ಗೊಂಡಿದ್ದ ವಿದ್ಯಾರ್ಥಿನಿ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಗಾಯಾಳು ವನ್ನು ಸ್ಥಳೀಯರು ಮಡಿಕೇರಿಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್

(ಮೊದಲ ಪುಟದಿಂದ) ಠಾಣೆಗೆ ಮಾಹಿತಿ ನೀಡಲಾಗಿದ್ದು, ಆರೋಪಿ ರಮೇಶನನ್ನು ಠಾಣೆಗೆ ಕರೆ ತಂದು ಕಾಟಾಚಾರಕ್ಕೆ ಮೊಕದ್ದಮೆ ದಾಖಲಿಸಿ ನಂತರ ಮನೆಗೆ ಬಿಟ್ಟುಬಂದಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣೆ, ದೌರ್ಜನ್ಯ ತಡೆಗಾಗಿ ಹಲವಾರು ಸಂಘ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ಸರ್ಕಾರಿ ಅಂಗ ಸಂಸ್ಥೆಗಳಿದ್ದರೂ ಯಾವುದಕ್ಕೂ ಮಾಹಿತಿ ನೀಡದೇ ಆರೋಪಿಯ ಪರ ಮೃದು ಧೋರಣೆ ಅನುಸರಿಸಿದ್ದಾರೆ.

ಅತ್ತ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಗೆ ಪ್ರಥಮ ಚಿಕಿತ್ಸೆ ನೀಡಿ, ಕತ್ತಿಯಿಂದ ಉಂಟಾದ ಗಾಯಕ್ಕೆ ಹೊಲಿಗೆ ಹಾಕಿ ಮನೆಗೆ ಕಳುಹಿಸಿದ್ದಾರೆ.

ಹಲ್ಲೆಗೊಳಗಾದ ಬಾಲಕಿಯ ತಂದೆಯೂ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ತಾಯಿಯ ಮಾನಸಿಕ ಆರೋಗ್ಯವೂ ಸರಿಯಿಲ್ಲ. ವಿದ್ಯಾರ್ಥಿನಿಗೆ ಮೂವರು ಸಹೋದರಿಯರಿದ್ದು, ಕುಟುಂಬ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದೆ. ಸದ್ಯ ಈ ಕುಟುಂಬಕ್ಕೆ ರಾಮು ಅವರ ಸಹೋದರಿ ನೆರವಾಗಿದ್ದಾರೆ.

ಇಲ್ಲಿ ಬಹುಮುಖ್ಯ ವಿಷಯವೆಂದರೆ ಕತ್ತಿಯಿಂದ ಬಲವಾಗಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿದ್ದರೂ ಸಹ ಕೊಲೆಯತ್ನ ಮೊಕದ್ದಮೆ ದಾಖಲಿಸಿಕೊಳ್ಳದ ಪೊಲೀಸ್ ಇಲಾಖೆ, ಹಲ್ಲೆಕೋರನ ಪರವಾಗಿ ಕೆಲಸ ಮಾಡಿರುವುದು ಎಷ್ಟು ಸರಿ? ಈ ಬಗ್ಗೆ ಗ್ರಾಮಸ್ಥರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದರೂ, ಅಲ್ಲಿಂದಲೂ ಯಾವುದೇ ಕಠಿಣ ಕ್ರಮವಾಗದ ಹಿಂದಿರುವ ಮಸಲತ್ತೇನು? ಎಂಬುದು ಗ್ರಾಮಸ್ಥರನ್ನು ಕಾಡುತ್ತಿರುವ ಪ್ರಶ್ನೆ!

ಇದರೊಂದಿಗೆ ಪರಿಶಿಷ್ಟ ಜಾತಿಗೆ ಸೇರಿರುವ ಈ ಕುಟುಂಬ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದು, ಪೋಷಕರಿಗೆ ವ್ಯವಹಾರ ಜ್ಞಾನವಿಲ್ಲ;ಇಲಾಖೆಗಳಿಗೆ ಓಡಾಡಲು ಕೈಯಲ್ಲಿ ಹಣವಿಲ್ಲ. ದಲಿತಪರ ಸಂಘಟನೆಗಳೆAದು ಹೋರಾಟ ನಡೆಸುವ ಹತ್ತಾರು ಸಂಘಸAಸ್ಥೆಗಳಿದ್ದರೂ ಈ ಬಡ ಕುಟುಂಬದ ನೆರವಿಗೆ ಧಾವಿಸುವ ಮನಸ್ಸು ಯಾರೂ ಮಾಡಿಲ್ಲ. ಮಡಿಕೇರಿಯ ಸಂಘಟನೆಯೊAದು ಪತ್ರಿಕಾಗೋಷ್ಠಿ ನಡೆಸಿ ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದನ್ನು ಬಿಟ್ಟರೆ ನ್ಯಾಯಕ್ಕಾಗಿ ಪರಿಣಾಮಕಾರಿ ಹೋರಾಟ ನಡೆಸಿಲ್ಲ. ಪರಿಣಾಮ ಪೊಲೀಸರು ಈ ಪ್ರಕರಣದಿಂದ ಕೈತೊಳೆದುಕೊಂಡಿದ್ದರೆ, ಆರೋಪಿ ಗ್ರಾಮದಲ್ಲಿ ಓಡಾಡಿಕೊಂಡಿದ್ದಾನೆ. ಹಲ್ಲೆಗೊಳಗಾದ ವಿದ್ಯಾರ್ಥಿನಿ ತಿಂಗಳಾಗುತ್ತಾ ಬಂದರೂ ಹಾಸಿಗೆಯಲ್ಲಿ ನರಳಾಡುತ್ತಿದ್ದಾಳೆ.