ಮಡಿಕೇರಿ, ನ. ೨೯: ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಸಮರ್ಪಕವಾದ ಪ್ರಸ್ತಾವನೆ ಸಲ್ಲಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಸೂಚನೆ ನೀಡಿದ್ದಾರೆ.
ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಡೆದ ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪಿಸುವ ಬಗ್ಗೆ ಮಾಹಿತಿ ಕೇಳಿಬರುತ್ತಿದ್ದು, ಆ ದಿಸೆಯಲ್ಲಿ ಅಗತ್ಯ ಪ್ರಸ್ತಾವನೆ ಸಲ್ಲಿಸಿ, ಸರಕಾರದ ಗಮನಸೆಳೆಯುವ ಪ್ರಯತ್ನ ಮಾಡುವಂತೆ ನಿರ್ದೇಶನ ನೀಡಿದರು.
ವೀರಾಜಪೇಟೆಯಲ್ಲಿರುವ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿಪಡಿಸಿ ಅಗತ್ಯ ಮೂಲಸೌಕರ್ಯ ಒದಗಿಸಿ ಹಾಗೂ ಶೆಟಲ್ ಬ್ಯಾಡ್ಮಿಂಟಲ್, ಜಿಮ್, ಕ್ವಾಷ್, ಟೇಬಲ್ ಟೆನ್ನಿಸ್ ಹಾಗೂ ಯೋಗ ಹಾಲ್‌ನಲ್ಲಿ ಪ್ರವೇಶ ಪಡೆದವರ ಶುಲ್ಕದ ಬಗ್ಗೆ ಮಾಹಿತಿ ಪಡೆದರು.
ತುರ್ತು ಕಾಮಗಾರಿಗೆ ಕ್ರಮಕೈಗೊಳ್ಳಿ
ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿನ ಹೊರಾಂಗಣ ಮತ್ತು ಒಳಾಂಗಣ ವ್ಯಾಪ್ತಿಯಲ್ಲಿ ಆಗಬೇಕಿರುವ ಕೆಲಸದ ಬಗ್ಗೆ ತುರ್ತಾಗಿ ಕ್ರಮಕೈಗೊಳ್ಳಿ, ಈಜುಕೊಳದ ಮೋಟಾರು ರಿಪೇರಿ ಮಾಡಿಸುವುದು, ಅಗತ್ಯವಿರುವೆಡೆ ಹೈಮಾಸ್ಟ್ ದೀಪ ಅಳವಡಿಸುವುದು, ಒಳಾಂಗಣ ಕ್ರೀಡಾಂಗಣದಲ್ಲಿ ಆಟವಾಡುವುದಕ್ಕೆ ಬರುವವರು ನೋಂದಣಿ ಮಾಡಿಕೊಂಡು, ಶುಲ್ಕ ಪಡೆಯುವುದು. ನೋಟಿಸ್ ಬೋರ್ಡ್ ಅಳವಡಿಸುವುದು. ತರಬೇತಿ ಅವಧಿ ನಿಖರವಾಗಿ ಪಾಲಿಸುವುದು ಮತ್ತಿತರ ವಿಚಾರಗಳನ್ನು ಪಾಲಿಸುವಂತೆ ನಿರ್ದೇಶಿಸಿದರು.
ನಗರಸಭೆ ಬಜೆಟ್‌ನಲ್ಲಿ ಕ್ರೀಡಾ ಉತ್ತೇಜನಕ್ಕೆ ಶೇ.೩ ರಷ್ಟು ಅನುದಾನ ಮೀಸಲಿಡುವಂತೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
(ಮೊದಲ ಪುಟದಿಂದ)
ಅಥ್ಲೆಟಿಕ್ಸ್ ಟ್ರಾö್ಯಕ್ ನಿರ್ಮಾಣಕ್ಕೆ ಅಂದಾಜು ಪಟ್ಟಿ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್. ಗುರುಸ್ವಾಮಿ ಅವರು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ೪೦೦ ಮೀ. ಸಿಂಥೆಟಿಕ್ ಅಥ್ಲೆಟಿಕ್ಸ್ ಟ್ರಾö್ಯಕ್ ನಿರ್ಮಾಣಕ್ಕೆ ಅಂದಾಜುಪಟ್ಟಿ ತಯಾರಿಸಲಾಗಿದೆ.
ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಟೇಬಲ್ ಟೆನ್ನಿಸ್ ಕೋರ್ಟ್ನ್ನು ಸರಿಪಡಿಸುವುದು. ಕಟ್ಟಡ ಸೋರುವಿಕೆ ಸರಿಪಡಿಸುವುದು, ಶೌಚಾಲಯ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ, ಆಟವಾಡಲು ಬೆಳಕಿನ ವ್ಯವಸ್ಥೆ ಮತ್ತಿತರವನ್ನು ವ್ಯವಸ್ಥೆ ಮಾಡಬೇಕಿದೆ. ಪೊನ್ನಂಪೇಟೆ ಕ್ರೀಡಾ ವಸತಿ ನಿಲಯ, ಖೇಲೋ ಇಂಡಿಯಾ ಕೇಂದ್ರಕ್ಕೆ ಬೇಕಾದ ಕ್ರೀಡಾಸಾಮಗ್ರಿಗಳ ಖರೀದಿಗೆ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದ ಅವರು, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಹೊಸದಾಗಿ ತಡೆಗೋಡೆ ನಿರ್ಮಾಣ, ಫುಟ್‌ಬಾಲ್ ಮೈದಾನ, ಮತ್ತಿತರ ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಸಲಾಗಿದೆ. ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳ ಯಂತ್ರ ಸರಿಪಡಿಸಬೇಕಿದೆ. ಈ ಸಂಬAಧ ಶೇ.೫೦ರಷ್ಟು ಹಣ ಬಿಡುಗಡೆ ಮಾಡಬೇಕಿದೆ ಎಂದರು.
ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಬಳಿ ಹೊಸ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ ೨೧೭.೩೯ ಲಕ್ಷ ರೂ.ಗಳ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಆಹ್ವಾನಿಸಲಾಗಿದೆ ಎಂದು ಗುರುಸ್ವಾಮಿ ಮಾಹಿತಿ ನೀಡಿದರು.
ಕ್ರೀಡಾ ಇಲಾಖೆಗೆ ಸೇರಿದ ಜಾಗವನ್ನು ಸರ್ವೇ ಮಾಡಲಾಗಿದ್ದು, ಇಲಾಖೆಯ ಹೆಸರಿಗೆ ಆರ್‌ಟಿಸಿ ಆಗಬೇಕಿದೆ ಎಂದು ಗಮನ ಸೆಳೆದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ಎಇಇ ಶಿವರಾಮ್, ಜಿ.ಪಂ. ಇಂಜಿನಿಯರ್ ಮಹದೇವು, ಪೌರಾಯುಕ್ತರಾದ ರಾಮದಾಸ್, ಕರ್ನಾಟಕ ಗ್ರಾಮೀಣ ಮೂಲ ಸೌಲಭ್ಯ ಅಭಿವೃದ್ಧಿ ಮಂಡಳಿ ಇಂಜಿನಿಯರ್ (ಕೆ.ಆರ್.ಐ.ಡಿ.ಎಲ್) ಪ್ರಮೋದ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್ ಹಾಗೂ ಇತರರು ಇದ್ದರು.