ಕಣಿವೆ, ನ. ೨೯: ನಡೆದಾಡುವ ದೇವರೆಂದೇ ಭಕ್ತ ಕೋಟಿ ಗಣದಲ್ಲಿ ಮನೆ ಮಾತಾಗಿದ್ದ ತುಮಕೂರು ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಮಹಾ ಸ್ವಾಮೀಜಿಗಳ ಗದ್ದುಗೆಗೆ ನಾಡಿನ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಲಕ್ಷ ಬಿಲ್ವಾರ್ಚನೆ ಪೂಜಾ ವಿಧಿಗಳು ಸೋಮವಾರ ನಡೆದವು.
ಇದೇ ಸಂದರ್ಭ ಗದ್ದುಗೆಯ ಬಳಿಯಲ್ಲಿ ವೀರಶೈವ ಲಿಂಗಾಯಿತ ಯುವ ವೇದಿಕೆ ವತಿಯಿಂದ ನಿರ್ಮಿಸಿದ್ದ ೪೫ ಅಡಿಗಳ ಎತ್ತರದ ಶ್ರೀಗಳ ಭಾವ ಚಿತ್ರಕ್ಕೆ ಹೆಲಿಕಾಪ್ಟರ್ ಮೂಲಕವೂ ಬಿಲ್ವಾರ್ಚನೆ ನಡೆಯಿತು.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಸಚಿವರು, ಶಾಸಕರು ಹಾಗೂ ನಾಡಿನ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು. ಸಿದ್ಧಗಂಗ ಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸೋಮವಾರ ಮುಂಜಾನೆ ಹಿರಿಯ ಶ್ರೀಗಳ ಅಲಂಕೃತ ಗದ್ದುಗೆಗೆ ಲಕ್ಷ ಬಿಲ್ವ ಪತ್ರೆಗಳಿಂದ ಅರ್ಚನೆ ಮಾಡಿದರು.
(ಮೊದಲ ಪುಟದಿಂದ) ವೀರಾಜಪೇಟೆ ತಾಲೂಕು ಅರಮೇರಿಯ
ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತಸ್ವಾಮೀಜಿ, ತೇಜೂರು ಮಠದ ಕಲ್ಯಾಣ ಸ್ವಾಮೀಜಿ, ವೀರಶೈವ ಯುವ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರು, ಕೊಡಗು ಜಿಲ್ಲಾ ವೀರಶೈವ ಯುವ ವೇದಿಕೆ ಅಧ್ಯಕ್ಷ ಷÀಡಕ್ಷರಿ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಭರತ್, ಪ್ರಶಾಂತ್, ಸಾಗರ್ ಮೊದಲಾದವರಿದ್ದರು.