ಮಡಿಕೇರಿ, ನ. ೨೭: ಭಾರತದ ಸಂವಿಧಾನ ದಿನ ಪ್ರಯುಕ್ತ ಶುಕ್ರವಾರ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಭಾರತ ದೇಶದ ಪ್ರಜೆಗಳಾದ ನಾವು, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಬದ್ಧರಾಗಿರಬೇಕು ಎಂದರು. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನ ಸ್ವಾತಂತ್ರö್ಯ, ಸ್ಥಾನಮಾನ ಹಾಗೂ ಸಮಾನತೆ ದೊರೆಯುವಂತೆ ಮಾಡಲು ಶ್ರಮಿಸಬೇಕು ಎಂದರು. ವ್ಯಕ್ತಿ ಗೌರವ, ರಾಷ್ಟçದ ಏಕತೆ, ಹಾಗೂ ಅಖಂಡತೆಯನ್ನು ಕಾಪಾಡುವುದು. ಭ್ರಾತೃತ್ವ ಭಾವನೆ ವೃದ್ಧಿಗೊಳಿಸಲು ಸಂಕಲ್ಪ ಮಾಡುವಂತಾಗಬೇಕು ಎಂದು ಅವರು ಬೋಧಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಗೌರವ್ ಕುಮಾರ್ ಸಂವಿಧಾನ ದಿನದ ಮಹತ್ವ ಕುರಿತು ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಜಿಲ್ಲಾ ಖಜಾನಾಧಿಕಾರಿ ಪದ್ಮಜಾ, ಭೂ ದಾಖಲೆಗಳ ಉಪ ನಿರ್ದೇಶಕರಾದ ಪಿ. ಶ್ರೀನಿವಾಸ್, ಜಿಲ್ಲಾ ನೋಂದಣಾಧಿಕಾರಿ ಸಿದ್ದೇಶ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ವಕೀಲರ ಸಂಘಮಡಿಕೇರಿ: ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಜೀವನ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಧೀಶ ಬಿ.ಎಲ್. ಜಿನರಾಳಕರ್ ತಿಳಿಸಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ನ್ಯಾಯಾಲಯ ಆವರಣದಲ್ಲಿ ಶುಕ್ರವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸಂವಿಧಾನವು ೪ ಆಧಾರ ಸ್ತಂಭಗಳನ್ನು ಒಳಗೊಂಡಿದೆ. ಸಂವಿಧಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಮನ್ನಣೆ ಇದೆ. ಆ ದಿಸೆಯಲ್ಲಿ ಸಂವಿಧಾನ ರಚಿಸಲು ಶ್ರಮಿಸಿದ ಎಲ್ಲರನ್ನೂ ಸ್ಮರಿಸಬೇಕು. ಅವರು ನಡೆದು ಬಂದ ಹಾದಿಯಲ್ಲಿ ಸಾಗುವುದರ ಜೊತೆಯಲ್ಲಿ ಸಂವಿಧಾನದ ಮೂಲ ಆಶಯವನ್ನು ಇಂದಿನ ಪೀಳಿಗೆ ಪಾಲಿಸಿ ಗೌರವಿಸಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಡಿ.ದಯಾನಂದ ಮಾತನಾಡಿ ಭಾರತ ದೇಶವು ಪ್ರಜಾಪ್ರಭುತ್ವ ರಾಷ್ಟçವಾಗಿದೆ. ಪ್ರಜಾ ಪ್ರಭುತ್ವವನ್ನು ದೇಶಕ್ಕೆ ಕೊಟ್ಟಿದ್ದು ಸಂವಿಧಾನವಾಗಿದೆ. ಅಂತಹ ಸಂವಿಧಾನವನ್ನು ಮಂಡಿಸಿ ನಮಗೆ ನಾವೇ ಅರ್ಪಿಸಿಕೊಂಡ ದಿನ ನವೆಂಬರ್ ೨೬ ಆಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್. ಸುಬ್ರಮಣ್ಯ ಅವರು ಮಾತನಾಡಿ ಪ್ರಜಾಸತ್ತಾತ್ಮಕ ಗಣರಾಜ್ಯ ಹೊಂದಲು, ಸಂವಿಧಾನದ ಮೂಲ ಆಶಯವನ್ನು ರಚಿಸಲು ಸಾಧಕ ಭಾದಕಗಳನ್ನು ಅರಿಯಲು ಸಂವಿಧಾನದ ಕರಡು ಸಮಿತಿಯ ರಚನೆಯ ಮೂಲಕ ಒಂದು ಸಂವಿಧಾನ ದೊರೆತಿದೆ. ಕರಡು ಸಮಿತಿಯ ಎಲ್ಲಾ ಸದಸ್ಯರು ವಕೀಲರಾಗಿದ್ದರು ಎಂದು ಅವರು ಸ್ಮರಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶರಾದ ರೂಪ ಕೆ., ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮನು ಬಿ.ಕೆ., ಅಪರ ಸಿವಿಲ್ ನ್ಯಾಯಾಧೀಶರಾದ ಸ್ಮಿತಾ ನಾಗಲಾಪುರ, ವಕೀಲರ ಸಂಘದ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಇತರರು ಇದ್ದರು. ರೋಹಿನಿ ಬಿ.ಕೆ. ಸ್ವಾಗತಿಸಿ ನಿರೂಪಿಸಿ, ವಂದಿಸಿದರು.