ಕಣಿವೆ, ನ. ೨೪ : ಒಂದರ ಮೇಲೊಂದು ಕಂಬಳಿಗಳನ್ನು ಹೊದ್ದು ಚಳಿಯಿಂದ ಮೈಯನ್ನು ಬೆಚ್ಚಗಿಡಬೇಕಾದ ಕಾರ್ತಿಕ ಮಾಸದ ಚಳಿಗಾಲದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ರೈತರನ್ನು ಹೈರಾಣು ಮಾಡಿದೆ.

ಕಳೆದ ಐದಾರು ತಿಂಗಳುಗಳಿAದ ಸತತವಾಗಿ ಎಡಬಿಡದೇ ಸುರಿಯುತ್ತಲೇ ಇರುವ ಮಳೆ ಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಬೆಳೆದ ಆಹಾರ ಧಾನ್ಯಗಳ ಬೆಳೆಗಳು, ತರಕಾರಿ, ಕಾಯಿ ಪಲ್ಯೆಗಳು ಸೇರಿದಂತೆ ಅನೇಕ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿವೆ.

ಕಟಾವಿಗೆ ಬಂದಿರುವ ಭತ್ತ ಗದ್ದೆಗಳಲ್ಲಿ ಉದುರುತ್ತಿದೆ. ಜೋಳದ ಮಾತೆಗಳು ಮೊಳಕೆಯೊಡೆಯುತ್ತಿವೆ. ಬೆಳೆ ಸೊಂಪಾಗಿ ಬರಲಿ ಎಂದು ಅಂಗಡಿಗಳಲ್ಲಿ ಖರೀದಿಸಿ ತಂದು ಹೊಲಗದ್ದೆಗಳಲ್ಲಿ ಸುರಿದ ರಾಸಾಯನಿಕ ಗೊಬ್ಬರದ ಸಾರ ಕಳೆದುಕೊಂಡಿದೆ.

ಬುಡದಿAದ ಮೇಲೆ ಬೆಳೆಯ ಬೇಕಾದ ಬೆಳೆಗಳು ವಿಪರೀತ ಮಳೆ ಯಿಂದಾಗಿ ನೆಲಕಚ್ಚಿವೆ. ಹೊಲ ಗದ್ದೆಗಳಲ್ಲಿ ಅಂತರ್ಜಲದ ಕೊರತೆ ನೀಗಿದ್ದು ಇಡೀ ಪರಿಸರ ಶೀತಪೀಡಿತ ಗೊಂಡಿದೆ.

ಈಗಾಗಲೇ ಕಟಾವುಗೊಂಡಿರುವ ಶುಂಠಿ ಹೊಲ, ಗದ್ದೆಗಳಲ್ಲಿ ಬದಲೀ ಬೆಳೆಗಳನ್ನು ಬೆಳೆಯಲು ಉಳುಮೆ ಮಾಡಲಾರದಷ್ಟು ಭೂಮಿ ಶೀತಪೀಡಿತಗೊಂಡಿದೆ.

ಕಳೆದ ಎರಡು ವರ್ಷಗಳ ಹಿಂದಿನಿAದಲೂ ಕೊರೊನಾ ಎಂಬ ಮಹಾಮಾರಿಯ ಆರ್ಭಟ ಹೆಚ್ಚಾಗಿ ಬೆಳೆದ ಫಸಲುಗಳಿಗೆ ಪೂರಕವಾದ ದರ ದೊರಕದೇ ಅತೀವ ನಷ್ಟಕ್ಕೆ ಒಳಗಾದ ಕೃಷಿಕರಿಗೆ ಗಾಯದ ಮೇಲೆ ಬರೆ ಎಳೆದ ಹಾಗೆ ಇದೀಗ ಸುರಿಯುತ್ತಿರುವ ಅಕಾಲಿಕ ಮಳೆ ರೈತರಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ.

‘ಯಾವ ಕೇಡಿಗೆ ಹೀಗೆ ಮಳೆ ಸುರೀತಾ ಇದೆ’ ಎಂದು ಮಳೆರಾಯ ನನ್ನು ಶಪಿಸುತ್ತಿರುವ ಕೃಷಿಕರು ಈ ಹಿಂದೆ ಮಳೆಗಾಗಿ ಪ್ರಾರ್ಥಿಸಿ ಮದುವೆ ಮಾಡಿಸಿದ್ದ ಕಪ್ಪೆಗಳು ಹಾಗೂ ಕತ್ತೆಗಳ ಹುಡುಕಾಟದಲ್ಲಿ ತೊಡಗಿದ್ದಾರೆ....!

ಅಗತ್ಯಕ್ಕಿಂತ ಹೆಚ್ಚಾಗಿ ಸುರಿಯುತ್ತಿರುವ ಮಳೆಗೆ ರೈತರು ಬೆಳೆದ ಹಸಿಮೆಣಸಿನ ಕಾಯಿ, ಟೊಮಾಟೋ, ಬೀನ್ಸ್, ಹೀರೇಕಾಯಿ ಮೊದಲಾದ ತರಕಾರಿ ಕಾಯಿ ಪಲ್ಯೆಗಳ ಫಸಲು ನೆಲಕಚ್ಚಿದ್ದರಿಂದಾಗಿ ಇದೀಗ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ.

ಕಳೆದ ಕೊರೊನಾ ಅವಧಿಯಲ್ಲಿ ಯಥೇಚ್ಚವಾಗಿ ಬೆಳೆದಿದ್ದ ಇದೇ ತರಕಾರಿ ಫಸಲಿಗೆ ಸೂಕ್ತ ಮಾರುಕಟ್ಟೆಯಿಲ್ಲದೇ ಬೆಲೆ ಪಾತಾಳಕ್ಕೆ ಇಳಿದದ್ದರಿಂದ ಕೈಯಲ್ಲಿ ಫಸಲಿದ್ದರೂ ಕೂಡ ಸೂಕ್ತ ಬೆಲೆ ಸಿಗದೇ ಅಪಾರ ನಷ್ಟಕ್ಕೆ ತುತ್ತಾಗಿದ್ದರು. ಆದರೆ ಇದೀಗ ಮಳೆ ಜಾಸ್ತಿಯಾದ ಪರಿಣಾಮ ತರಕಾರಿ ಫಸಲು ಕೈಗೆ ಬಾರದೇ ಮತ್ತೆ ನಷ್ಟಕ್ಕೆ ಸಿಲುಕುವಂತಾಗಿದೆ.

ಅತ್ತ ಸರ್ಕಾರ ಬೆಳೆ ನಷ್ಟಕ್ಕೆ ಸಿಲುಕಿದ ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡುವ ಬಗ್ಗೆ ಘೋಷಿಸಿದೆ ಯಾದರೂ, ಕೃಷಿ, ಕಂದಾಯ, ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳ ವಿಳಂಬ ನೀತಿ ಯಿಂದಾಗಿ ಸರಕಾರದ ಪರಿಹಾರದ ಯೋಜನೆಗಳಿಂದ ರೈತರಿಗೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಹ ದುಸ್ಥಿತಿ ಉಂಟಾಗಿದೆ.

ಒಟ್ಟಾರೆ, ಅತ್ತ ಆಳುವವರ ಕಪಿಮುಷ್ಟಿ ಹಾಗೂ ಇತ್ತ ಪ್ರಕೃತಿಯ ಮುನಿಸಿಗೆ ಸಿಲುಕಿ ವಿಲ ವಿಲನೆ ಒದ್ದಾಡುತ್ತಿರುವ ರೈತರ ಬವಣೆಯನ್ನು ನೋಡುವಂತಿಲ್ಲ.

(ವರದಿ ; ಕೆ.ಎಸ್.ಮೂರ್ತಿ)