ಮಡಿಕೇರಿ, ನ. ೨೨: ಯುವ ಪ್ರತಿಭೆಗಳನ್ನು ಗುರುತಿಸುವುದು, ಯುವ ಜನತೆಗೆ ಸಾಹಿತ್ಯ ಕ್ಷೇತ್ರದ ಪರಂಪರೆಯನ್ನು ಪರಿಚಯಿಸುವುದು, ಕನ್ನಡ ಭವನ ನಿರ್ಮಾಣ, ರಾಜಕೀಯ, ಪಕ್ಷ, ಜಾತಿ ರಹಿತವಾಗಿ ಸಾಹಿತ್ಯ ಪರಿಷತ್ ಅನ್ನು ಮುನ್ನಡೆಸುವುದಾಗಿ ಕೊಡಗು ಕಸಾಪದ ನೂತನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಅವರು ಮುಂದಿನ ನಡೆ ಕುರಿತು ವಿವರಿಸಿದರು.

‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊAಡ ಅವರು, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳ ಪೈಕಿ ಸಾಹಿತ್ಯಾಸಕ್ತರನ್ನು ಗುರುತಿಸುವುದು, ಕನ್ನಡ ನಾಡು ನುಡಿ ಪರಂಪರೆಯನ್ನು ಈ ಪ್ರತಿಭೆಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವುದು ತಮ್ಮ ಗುರಿಯಾಗಿದೆ. ಇಂತಹ ಕಿರಿಯ ಪೀಳಿಗೆಯವರಿಗೆ ನಾಡಿನ ಕವಿ-ಸಾಹಿತಿಗಳ ಪರಿಚಯ ಮಾಡಿಸಿ ಅವರಲ್ಲಿನ ಸಾಹಿತ್ಯಾಸಕ್ತಿಯನ್ನು ಮತ್ತಷ್ಟು

(ಮೊದಲ ಪುಟದಿಂದ) ಹೆಚ್ಚಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದರು. ಯುವ ಪ್ರತಿಭೆ ಸೇರಿದಂತೆ ಸಾಹಿತಿಗಳನ್ನು ಗುರುತಿಸುವ ಕೆಲಸದಲ್ಲಿ, ಯಾವುದೇ ಜಾತಿ, ಪಕ್ಷ ಬೇಧವಿಲ್ಲದೆ ಕಾರ್ಯಪ್ರವೃತ್ತರಾಗುವುದಾಗಿ ಅವರು ಭರವಸೆ ನೀಡಿದರು.

ಪರಿಷತ್‌ನಲ್ಲಿ ಈಗಾಗಲೇ ೨೦ ರಿಂದ ೨೫ ದತ್ತಿನಿಧಿಗಳಿವೆ. ಇನ್ನಷ್ಟು ಮಂದಿ ಮುಂದೆ ಬಂದು ದತ್ತಿನಿಧಿ ಸ್ಥಾಪಿಸಲು ಬಯಸಿದ್ದಾರೆ. ಇದರಿಂದ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಹಾಯ ಆಗಲಿದೆ. ತಾಲೂಕುವಾರು ಹಾಗೂ ಹೋಬಳಿವಾರು ಮಟ್ಟದಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಿ, ಹಿರಿಯ ಸಾಹಿತಿಗಳ ಅನಿಸಿಕೆಗಳಿಗೆ ಬೆಲೆ ನೀಡಿ ನೂತನ ತಂತ್ರಜ್ಞಾನಗಳ ಸಹಾಯದಿಂದ ವಿಭಿನ್ನ ರೀತಿಯ ಸಾಹಿತ್ಯ ಪೂರಕ ಕಾರ್ಯಕ್ರಮಗಳನ್ನು ಮಾಡುವ ಭರವಸೆ ಇತ್ತರು. ಮಡಿಕೇರಿಯ ಸುದರ್ಶನ ವೃತ್ತದಲ್ಲಿನ ಗುರುತಿಸಲ್ಪಟ್ಟ ಜಾಗದಲ್ಲಿ ಕನ್ನಡ ಭವನ ನಿಮಾರ್ಣಕ್ಕೆ ಮೊದಲ ಆದ್ಯತೆ ನೀಡುವುದಾಗಿ ಅವರು ತಿಳಿಸಿದರು.

ಗೆಲುವಿನ ಹಾದಿ

ಸುಮಾರು ಐದೂವರೆ ವರ್ಷಗಳ ಕಾಲ ಹಳೆಯ ಆಡಳಿತ ನಡೆಯಿತು. ಈ ಬಾರಿ ಜನರು ಬದಲಾವಣೆಯನ್ನು ನಿರೀಕ್ಷಿಸಿದ್ದರು. ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ ರಮೇಶ್ ಸೇರಿದಂತೆ ಲೇಖಕರ ಮತ್ತು ಕಲಾವಿದರ ಬಳಗದ ಸದಸ್ಯರು, ಸಾಹಿತ್ಯ ಪರಿಷತ್‌ನ ಸ್ನೇಹಿತರು, ಅಧ್ಯಾಪಕರ ಸಂಘದ ಪದಾಧಿಕಾರಿಗಳು ಹಾಗೂ ಅಧ್ಯಾಪಕರುಗಳ ಸಹಕಾರದಿಂದಾಗಿ ಗೆಲ್ಲಲು ಸಹಕಾರವಾಯಿತೆಂದರು.

ತಾವು ಲೇಖಕರ ಮತ್ತು ಕಲಾವಿದರ ಬಳಗದ ಜಿಲ್ಲಾಧ್ಯಕ್ಷ ಕೂಡ ಆಗಿದ್ದು, ಈ ಬಳಗದ ಮೂಲಕ ಮುಖ್ಯವಾಗಿ ಕೊರೊನಾ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಜಾನಪದ ಗೀತ ಗಾಯನ, ವಚನ ಸಪ್ತಾಹ ಸೇರಿದಂತೆ ಹತ್ತು-ಹಲವಾರು ಕಾರ್ಯಕ್ರಮಗಳ ಮುಖಾಂತರ ಸುಮಾರು ೩,೦೦೦ ಜನರ ಭಾಗವಹಿಸುವಿಕೆಯ ವಿಭಿನ್ನ ಯಶಸ್ವಿ ಪ್ರಯತ್ನ ನಡೆಸಿದ್ದು, ಇದರಲ್ಲಿ ೩೦೦ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡಲಾಯಿತು. ಈ ತಮ್ಮ ಕಾರ್ಯವು ಕೂಡ ಚುನಾವಣೆಗೆ ಸಕಾರಾತ್ಮಕ ಬಲ ನೀಡಿತೆಂದು ಅವರು ಹೇಳಿದರು. ಚುನಾವಣೆ ಪ್ರಚಾರ ಸಂದರ್ಭ ಜಿಲ್ಲೆಯ ಸುಮಾರು ೧,೬೦೦ ಮನೆಗಳಿಗೆ ಭೇಟಿ ನೀಡಿ ೨,೪೦೦ ಸದಸ್ಯರ ಪೈಕಿ ಸುಮಾರು ೨,೧೦೦ ಮಂದಿಯನ್ನಾದರೂ ಭೇಟಿ ಮಾಡಿದ್ದಾಗಿ ತಿಳಿಸಿದರು.