ವೀರಾಜಪೇಟೆ, ನ. ೧೮: ಗ್ರಾಮದಲ್ಲಿ ಹೆಚ್ಚಾಗಿರುವ ಕಾಡಾನೆ ಉಪಟಳವನ್ನು ತಡೆಯಲು ಕ್ರಮವಹಿಸುವಂತೆ ಆಗ್ರಹಿಸಿ ಕದನೂರು ಭಾಗದ ರೈತರು ನಗರದ ಅರಣ್ಯ ಭವನದ ಎದುರು ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕದನೂರು ರೈತ ಜಾಗೃತಿ ಸಂಘದ ವತಿಯಿಂದ ಅರಣ್ಯ ಭವನದ ಮುಂದೆ ಕಾಡಾನೆ ಹಾವಳಿ ತಡೆಗೆ ಹಾಗೂ ಕಾಡಾನೆ ದಾಳಿಯಿಂದ ನಷ್ಟವಾದ ಬೆಳೆಗೆ ಪರಿಹಾರ ನೀಡುವಂತೆ ಪ್ರತಿಭಟನೆಯೊಂದಿಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಸದಸ್ಯ ಅಮ್ಮಣಿಚಂಡ ರವಿ ಉತ್ತಪ್ಪ ಮಾತನಾಡಿ. ಕದನೂರು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಿಂಡು ಗ್ರಾಮದಲ್ಲಿ ಬೀಡುಬಿಟ್ಟಿದ್ದು, ತೋಟಗಳು ಮತ್ತು ಫಸಲು ಬರುವ ಗದ್ದೆಯಲ್ಲಿ ದಾಂಧಲೆ ನಡೆಸಿದ ಪರಿಣಾಮ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಕಾಡಾನೆಗಳು ನಿರಂತರವಾಗಿ ದಾಳಿ ನಡೆಸುತ್ತಿರುವ ಬಗ್ಗೆ ಅರಣ್ಯ ಸಂರಕ್ಷಣಾಧಿಕಾರಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಅಧ್ಯಕ್ಷ ಪಾಲೇಕಂಡ ಜೀವನ್ ಬೆಳ್ಯಪ್ಪ ಮಾತನಾಡಿ, ಕಾಡಾನೆ ದಾಳಿಯಿಂದ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ದೊರೆತಿಲ್ಲ. ಈ ನಿಟ್ಟಿನಲ್ಲಿ ಕ್ರಮವಹಿಸುವಂತೆ ಆಗ್ರಹಿಸಿ ಎಂದು ಹೇಳಿದರು.
ರೈತರ ಮನವಿ ಸ್ವೀಕರಿಸಿ ಮಾತನಾಡಿದ ಅರಣ್ಯ ಸಂರಕ್ಷಣಾಧಿಕಾರಿ ರೋಶಿನಿ, ವನ್ಯ ಜೀವಿಗಳ ದಾಳಿಯಿಂದಾಗಿ ನಷ್ಟವಾದ ಬೆಳೆಗಳಿಗೆ ಪರಿಹಾರ ರೂಪದಲ್ಲಿ ಸರ್ಕಾರವು ನಿಗದಿಗೊಳಿಸಿದ ಹಣವನ್ನು ಬೆಳೆಗಳ ಸಮೀಕ್ಷೆ ನಡೆಸಿ ನೀಡಲಾಗುತ್ತದೆ. ಹೆಚ್ಚಿನ ಪರಿಹಾರವನ್ನು ಸರ್ಕಾರದ ಮಟ್ಟದಲ್ಲಿ ವ್ಯವಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ದೇವಯ್ಯ, ಇಲಾಖೆಯ ಸಿಬ್ಬಂದಿಗಳು, ಕದನೂರು ರೈತ ಜಾಗೃತಿ ಸಂಘದ ಕಾರ್ಯದÀರ್ಶಿ ಪೆಮ್ಮಂಡ ಅಪ್ಪಣ್ಣ, ರೈತ ಸಂಘದ ಪದಾಧಿಕಾರಿಗಳು ಸದಸ್ಯರು ಮತ್ತು ರೈತರು ಹಾಜರಿದ್ದರು.
- ಕಿಶೋರ್ ಶೆಟ್ಟಿ