ಚೆಯ್ಯಂಡಾಣೆ, ನ. ೧೮: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ಕಾರ್ಯಾಲಯದ ಕಟ್ಟಡವು ಶೋಚನೀಯ ಪರಿಸ್ಥಿತಿಯಲ್ಲಿದ್ದು, ನೆಲಕಚ್ಚುವ ಆತಂಕದಲ್ಲಿದೆ. ಈ ಕಟ್ಟಡದ ನಿರ್ಮಾಣಕ್ಕೆ ಹಲವಾರು ದಶಕಗಳ ಇತಿಹಾಸವಿದೆ. ಮಳೆ ಸುರಿಯಲಾರಂಬಿಸಿದರೆ ನೀರು ಕಚೇರಿಯ ಒಳ ಪ್ರವೇಶಿಸುತ್ತಿದೆ. ಇದರಿಂದ ಕಚೇರಿ ನಿರ್ವಹಣೆ ಮತ್ತು ಕಡತಗಳ ಸಮಗ್ರ ಸಂರಕ್ಷಣೆಗೆ ತೊಡಕಾಗುತ್ತಿದೆ. ಕಚೇರಿಯೊಳಗೆ ಮಳೆ ನೀರು ಒಳಪ್ರವೇಶ ತಡೆಯಲು ತಾತ್ಕಾಲಿಕವಾಗಿ ಟಾರ್ಪಲ್ ಹಾಕಿದ್ದು, ಅದೂ ಕೂಡ ಮಳೆಯ ರಭಸಕ್ಕೆ ಹಾರಿ ಹೋಗುವಂತಿದ್ದು, ಸಂಬAಧಪಟ್ಟ ಅಧಿಕಾರಿಗಳು ಕೂಡಲೇ ಗ್ರಾಮ ಪಂಚಾಯಿತಿ ಕಟ್ಟಡ ದುರಸ್ತಿಪಡಿಸಿಕೊಡಲು ಕ್ರಮ ಕೈಗೊಳ್ಳಲು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿ ಕಚೇರಿ ಬೀಳುವ ಹಂತದಲ್ಲಿದ್ದು, ಹಲವಾರು ಬಾರಿ ನಾವು ದುರಸ್ತಿಪಡಿಸಿದ್ದೇವೆ. ಮಳೆ ಬಂದರೆ ನೀರು ಕಚೇರಿಯ ಒಳಗೆ ಬರುತ್ತಿದ್ದು, ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿಗಳಿಗೆ ತೊಂದರೆಯಾಗುತ್ತಿದೆ.
ಗ್ರಾಮ ಪಂಚಾಯಿತಿಯ ನೂತನ ಕಟ್ಟಡಕ್ಕೆ ಈಗಾಗಲೇ ಜಾಗ ನಿಗದಿಪಡಿಸಿದ್ದು, ಮೇಲಧಿಕಾರಿಗಳು ಅನುಮತಿ ನೀಡಿದರೆ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
-ಅಶ್ರಫ್