ಶ್ರೀಮಂಗಲ, ನ. ೧೮: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಅತಿವೃಷ್ಟಿ-ಅಕಾಲಿಕ ಮಳೆ ಹಾಗೂ ಕಾಫಿ ಕಟಾವು ಸಮಯದವರೆಗೆ ನಿರಂತರವಾಗಿ ಮುಂದುವರೆದಿರುವ ಮಳೆ, ಮೋಡ ಮುಸುಕಿದ ವಾತಾವರಣದಿಂದ ಕಾಫಿ, ಅಡಿಕೆ, ಕಾಳುಮೆಣಸು, ಭತ್ತದ ಬೆಳೆಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಕಾಫಿ ಮಂಡಳಿ,ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಮರು ಸಮೀಕ್ಷೆ ನಡೆಸಿ ಬೆಳೆ ನಷ್ಟದ ವರದಿ ಸಲ್ಲಿಸಬೇಕು. ಸರಕಾರ ಕೊಡಗು ಜಿಲ್ಲೆಯನ್ನು ಅತಿವೃಷ್ಟಿ ಮತ್ತು ಹವಾಮಾನ ವೈಪರೀತ್ಯಕ್ಕೆ ತುತ್ತಾದ ಜಿಲ್ಲೆಯೆಂದು ಘೋಷಿಸಿ ಬೆಳೆಗಾರರಿಗೆ ವಿಶೇಷ ಪರಿಹಾರ ನೀಡಬೇಕೆಂದು ಕೊಡಗು ಬೆಳೆಗಾರರ ಒಕ್ಕೂಟ ಆಗ್ರಹಿಸಿದೆ.

ಗೋಣಿಕೊಪ್ಪದಲ್ಲಿ ನಡೆದ ಕೊಡಗು ಬೆಳೆಗಾgರÀ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಡಿಕೇರಿ ತಾಲೂಕಿನಲ್ಲಿ ಕಾಫಿ ಮಂಡಳಿ ಕಾಫಿ ಬೆಳೆ ನಷ್ಟ ಸಮೀಕ್ಷೆಯಂತೆ ಪರಿಹಾರ ಲಭ್ಯವಾಗಲು ಪೂರಕವಾದ ವರದಿ ಸಲ್ಲಿಸಿಲ್ಲ. ಸಮೀಕ್ಷೆಯಂತೆ ಯಾವುದೇ ಗ್ರಾಮಕ್ಕೆ ಪರಿಹಾರ ಲಭ್ಯವಾಗುವುದಿಲ್ಲ. ಇಂತಹ ಅವೈಜ್ಞಾನಿಕ ಸಮೀಕ್ಷೆ ಖಂಡನೀಯ. ಬೆಳೆಗಾರರ ಬೆಳೆ ನಷ್ಟವನ್ನು ಅಂದಾಜಿಸಲು ಕಾಫಿ ಮಂಡಳಿ ಅಧಿಕಾರಿಗಳು ಉದ್ಧಟತನ ತೋರುತ್ತಿದ್ದು, ಕೂಡಲೇ ಬೇರೆ ಅಧಿಕಾರಿಗಳನ್ನು ನೇಮಿಸಿ ಮರು ಸಮೀಕ್ಷೆ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.

ಮಳೆಯೊಂದಿಗೆ, ಮೋಡ ಕವಿದ ವಾತಾವರಣದಿಂದ ಕಾಫಿ, ಅಡಿಕೆ, ಕಾಳುಮೆಣಸು, ಭತ್ತ ಬೆಳೆಗೆ ನಷ್ಟವಾಗಿದೆ. ಇಂತಹ ಹವಾಮಾನದಿಂದ ಮುಂದಿನ ವರ್ಷದ ಫಸಲಿನ ಮೇಲೂ ದುಷ್ಪರಿಣಾಮ ಬೀರುತ್ತದೆ. ಕಾಫಿ, ಅಡಿಕೆ ಕಟಾವಿಗೆ ಬಂದಿದ್ದರೂ ಕಟಾವು ಮಾಡಿ ಒಣಗಿಸಲು ಸಾಧ್ಯವಾಗದೇ ಉದುರುತ್ತಿದೆ. ಈಗಾಗಲೇ ಸತತ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪ, ಎರಡು ವರ್ಷದಿಂದ ಕೋವಿಡ್ ೧೯ ಸಾಂಕ್ರಾಮಿಕ ಸೋಂಕು ಕಾಯಿಲೆಯಿಂದ ಬೆಳೆಗಾರರು ಸಹ ಸಂಕಷ್ಟಕ್ಕೆ ತುತ್ತಾಗಿದ್ದು, ಪ್ರಸಕ್ತ ವರ್ಷದ ಅತಿವೃಷ್ಟಿ, ಹವಾಮಾನ ವೈಪರೀತ್ಯದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಬೆಳೆಗಾರರಿಗೆ ಸರಕಾರ ಸೂಕ್ತ ಪರಿಹಾರ, ವಿಶೇಷ ನೆರವು ಒದಗಿಸಲು ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.ಈ ನಿಟ್ಟಿನಲ್ಲಿ ಕೊಡಗು ಬೆಳೆಗಾರ ಒಕ್ಕೂಟ ನೇತೃತ್ವದಲ್ಲಿ ಜಿಲ್ಲೆಯ ಪ್ರಮುಖ ಸಂಘ ಸಂಸ್ಥೆಗಳ ಮುಖಂಡರ ಸಭೆ ಕರೆದು ಮುಂದಿನ ಕಾರ್ಯಯೋಜನೆ ರೂಪಿಸಲು ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಕೋಶಾಧಿಕಾರಿ ಮಾಣೀರ ವಿಜಯ ನಂಜಪ್ಪ, ಆಡಳಿತ ಮಂಡಳಿ ಸದಸ್ಯರಾದ ಕಾಳಿಮಾಡ ತಮ್ಮು ಮುತ್ತಣ್ಣ, ಚೇಂದಿರ ಸುಮಿತಾ ಅಪ್ಪಣ್ಣ, ಕೋಳೆರ ಭಾರತಿ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ, ನಿವೃತ್ತ ಸೇನಾಧಿಕಾರಿ ಚೇಂದಿರ ಅಪ್ಪಣ್ಣ ಹಾಜರಿದ್ದರು.