ಗುಡ್ಡೆಹೊಸೂರು, ನ. ೧೫: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಮೊರಾರ್ಜಿ ವಸತಿ ಶಾಲಾ ಆವರಣದಲ್ಲಿ ಲೇಖಕಿ ಸುನಿತಾ ಅವರು ಬರೆದ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭವು ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ನಡೆಯಿತು. ಅವರ ಕೃತಿಯಾದ "ಇಂಜಲಗೇರಿ ಪೋಸ್ಟ್" ಮತ್ತು ಅನುವಾದ ಕೃತಿ ಸುಂದರವನದಲ್ಲಿ ನೊಣಗಳ ರಾಜ್ಯಭಾರ" ಎಂಬ ಎರಡು ಪುಸ್ತಕ ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿದ್ದ ಗಣ್ಯರ ಸಮ್ಮುಖದಲ್ಲಿ ಶಾಲಾ ವಿದ್ಯಾರ್ಥಿಗಳು ಪುಸ್ತಕ ಅನಾವರಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಆನಂದ ತೀರ್ಥ ಭಾರಧ್ವಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಡಿಕೇರಿ ಆಕಾಶವಾಣಿ ಅಧಿಕಾರಿ ಸುಬ್ರಾಯ ಸಂಪಾಜೆ, ಕವಿಯಿತ್ರಿ ಕೋರನ ಸರಸ್ವತಿ, ಬಾಲಮಂಗಳ ಪುಸ್ತಕದ ಸಂಪಾದಕರಾದ ನರೇಂದ್ರ ಪಾರೆಕಟ್ಟು, ಅಶ್ಲಾಂ ಪಾಷ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಬಸವರಾಜ್, ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ, ಮುಂತಾದವರು ಹಾಜರಿದ್ದರು. ಅಲ್ಲಿನ ಶಿಕ್ಷಕರಾದ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ರೆಡ್ಡಿಯವರು ಸರ್ವರನ್ನು ಸ್ವಾಗತಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಗಣ್ಯರು ಸುನಿತಾ ಅವರ ಕೃತಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಮಕ್ಕಳಿಗೆ ನೀತಿ ಪಾಠ ಕಲಿಸುವ ಅನುವಾದ ಕೃತಿಯು ಮಕ್ಕಳಿಗೋಸ್ಕರ ಬರೆದ ಕೃತಿಯಾಗಿದ್ದು, ಮಕ್ಕಳು ಪಡೆದು ಓದುವಂತೆ ನರೇಂದ್ರ ಅವರು ಮಕ್ಕಳಿಗೆ ಹೇಳಿದರು. ಅಲ್ಲದೆ ಸುನಿತಾ ಅವರ "ಇಂಜಲಗೇರೆ ಪೋಸ್ಟ್" ಕೃತಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆತಿದ್ದು, ಅವರ ಹಲವು ಕೃತಿಗಳು ಈ ಹಿಂದೆ ಹಲವು ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಮುಖ್ಯವಾಗಿ ಶಕ್ತಿ ಪತ್ರಿಕೆಯಲ್ಲಿ ಹಲವು ಕೃತಿಗಳು, ಕವನ, ಕಾದಂಬರಿಗಳು ಪ್ರಕಟಗೊಂಡಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಅವರು ಹಲವು ಸಾಧನೆ ಮಾಡಿದ್ದಾರೆ. ರಂಗಸಮುದ್ರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು ಈ ಹಿಂದೆ ಜಿಲ್ಲಾಮಟ್ಟದ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಲವು ಶಿಕ್ಷಕ ವೃಂದದವರು ಮತ್ತು ಗಣ್ಯರು ಭಾಗವಹಿಸಿದ್ದರು. ಈ ಸಂದರ್ಭ ಶಿಕ್ಷಕಿ ತುಳಸಿ ಅವರು ಸುನೀತ ಅವರ ವ್ಯಕ್ತಿ ಪರಿಚಯ ಮಾಡಿದರು.
-ಗಣೇಶ್ ಕುಡೆಕ್ಕಲ್.