ಮಡಿಕೇರಿ, ನ. ೧೪: ಸೋಮವಾರಪೇಟೆ ತಾಲೂಕಿನ ಮಾದಾಪುರ ಗ್ರಾ.ಪಂ.ಗೆ ಸೇರಿದ ಜಂಬೂರು ಬಾಣೆಯಲ್ಲಿ ಅತಿವೃಷ್ಟಿ ಹಾನಿ ಸಂತ್ರಸ್ತರಿಗಾಗಿ ಸರಕಾರ ನಿರ್ಮಿಸಿಕೊಟ್ಟಿರುವ ವಸತಿಗಳ ಮಾದರಿಯಲ್ಲೇ ಸ್ಥಳೀಯ ಗ್ರಾಮದ ನಿವೇಶನ ರಹಿತ ಕಡುಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್‌ನ ಸೂರಿಗಾಗಿ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ, ವಸತಿ ಸೌಲಭ್ಯಕ್ಕಾಗಿ ಹಲವು ಬಾರಿ ಪಂಚಾಯಿತಿ ಮತ್ತು ಸಂಬAಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಸ್ಪಂದನ ಸಿಕ್ಕಿಲ್ಲವೆಂದು ಆರೋಪಿಸಿದರು.

ಮಾದಾಪುರ ಪಂಚಾಯಿತಿಗೆ ಸೇರಿದ ಜಂಬೂರು ಬಾಣೆಯಲ್ಲಿ ಅತಿವೃಷ್ಟಿ ಹಾನಿ ಸಂತ್ರಸ್ತರಿಗಾಗಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಇಲ್ಲಿ ಮತ್ತಷ್ಟು ಸರಕಾರಿ ಜಾಗ ಖಾಲಿ ಇರುವುದರಿಂದ ಇದೇ ಮಾದರಿಯಲ್ಲಿ ಸ್ಥಳೀಯ ಕಾರ್ಮಿಕರಿಗೂ ವಸತಿ ಸೌಲಭ್ಯವನ್ನು ಸರಕಾರ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಬಿ. ಅಣ್ಣಪ್ಪ, ಕಾರ್ಯದರ್ಶಿ ಶಬಾನ ಹಾಗೂ ಸಂಚಾಲಕಿ ಸರೋಜ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.