ಮಡಿಕೇರಿ, ನ. ೧೩: ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿ.ಜೆ.ಪಿ. ನೇತೃತ್ವದ ರಾಜ್ಯ ಸರಕಾರದ ಸಚಿವ ಸಂಪುಟದಲ್ಲಿ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯಬೇಕೆಂಬ ಬೇಡಿಕೆಗೆ ಯಾವುದೇ ಪ್ರತಿಫಲ ದೊರೆತಿಲ್ಲ. ಜಿಲ್ಲೆಯ ಇಬ್ಬರು ಹಿರಿಯ ಶಾಸಕರನ್ನು ಈ ತನಕವೂ ಸರಕಾರದಲ್ಲಿ ಸಚಿವ ಸ್ಥಾನಕ್ಕೆ ಪರಿಗಣಿಸಲಾಗಿಲ್ಲ.
ಈ ನಡುವೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿ. ಸೋಮಣ್ಣ ಉಸ್ತುವಾರಿ ಸಚಿವರಾಗಿದ್ದರು. ನಂತರದ ರಾಜಕೀಯ ಬದಲಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದು, ಇದೀಗ ಕೆಲವು ತಿಂಗಳಿನಿAದ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಕೊಡಗಿನ ಉಸ್ತುವಾರಿ ನೀಡಲಾಗಿದೆ.
ದಕ್ಷಿಣ ಕನ್ನಡದಿಂದ ವಿಧಾನ ಪರಿಷತ್ ಸದಸ್ಯರಾಗಿರುವ ಶ್ರೀನಿವಾಸ ಪೂಜಾರಿ ಅವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಇದೀಗ ಜನವರಿ ೫ಕ್ಕೆ ಅಧಿಕಾರ ಮುಕ್ತಾಯಗೊಳ್ಳಲಿರುವ ೨೫ ಎಂ.ಎಲ್.ಸಿ.ಗಳ ಪಟ್ಟಿಯಲ್ಲಿ ಇವರೂ ಸೇರಿದ್ದಾರೆ.
(ಮೊದಲ ಪುಟದಿಂದ) ಈ ಹಿನ್ನೆಲೆಯಲ್ಲಿ ಮುಂದೇನು ಎಂಬ ಪ್ರಶ್ನೆ ಮೂಡುವಂತಾಗಿದೆ.
ಡಿಸೆAಬರ್ ೧೦ ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ ೧೬ಕ್ಕೆ ಫಲಿತಾಂಶ ಹೊರಬೀಳಲಿದೆ. ಆದರೂ ಹಾಲಿ ಸದಸ್ಯರ ಅಧಿಕಾರಾವಧಿ ಜನವರಿ ೫ ರ ತನಕವೂ ಇರಲಿದೆ ಎಂಬುದು ಒಂದು ಅಂಶ.
ಆದರೆ ಈಗಿನ ಸನ್ನಿವೇಶದಲ್ಲಿ ಶ್ರೀನಿವಾಸ್ ಪೂಜಾರಿ ಅವರು ಮತ್ತೊಮ್ಮೆ ಟಿಕೆಟ್ ಪಡೆಯಬೇಕು. ಟಿಕೆಟ್ ಪಡೆದು ಜಯ ಸಾಧಿಸುವದರೊಂದಿಗೆ ಅವರನ್ನು ಮತ್ತೆ ಸಚಿವರನ್ನಾಗಿ ಸರಕಾರದಲ್ಲಿ ಉಳಿಸಿಕೊಳ್ಳಬೇಕಿದೆ. ಪ್ರಸ್ತುತ ಜನವರಿ ೫ ರ ತನಕವೂ ಇವರ ಅಧಿಕಾರ ಇರುತ್ತದೆಯಾದರೂ ಇದೀಗ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಏನಾಗಬಹುದು... ಇವರೇ ಮತ್ತೊಮ್ಮೆ ಟಿಕೆಟ್ ಪಡೆದು ದಕ್ಷಿಣ ಕನ್ನಡದಿಂದ ಆರಿಸಿ ಬರಲಿದ್ದಾರೆಯೇ... ಮತ್ತೆ ಸಚಿವರಾಗಿ ಈ ಮೂಲಕ ಕೊಡಗಿನ ಉಸ್ತುವಾರಿಯಾಗಿಯೂ ಮುಂದುವರಿಯಲಿದ್ದಾರೆಯೇ.. ಎಂಬುದು ಸದ್ಯದ ಕೌತುಕವಾಗಿದೆ.