ತಿಂಗಳಿಗೆ ೧ ಲಕ್ಷದಷ್ಟು ಮೊತ್ತ..!
ಮಡಿಕೇರಿ, ನ. ೯: ಮಡಿಕೇರಿ ಸ್ಟುವರ್ಟ್ ಹಿಲ್ ಬಳಿ ಇರುವ ನಿವಾಸಿಯೊಬ್ಬರಿಗೆ ಸೆಸ್ಕ್ ನೀಡಿದ ಬಿಲ್ನ ಮೊತ್ತ ವಿದ್ಯುತ್ ಶಾಕ್ ನೀಡಿದಂತಾಗಿದೆ. ಸೆಪ್ಟೆಂಬರ್ ತಿಂಗಳ ಬಿಲ್ನ ಮೊತ್ತ ಒಟ್ಟು ರೂ. ೧,೦೫,೩೨೨ ಆಗಿದ್ದು ಗ್ರಾಹಕರು ದಂಗಾಗಿದ್ದಾರೆ.
೫-೬ ವರ್ಷಗಳ ಹಿಂದೆ ಮೀಟರ್ ಸರಿ ಇಲ್ಲದಿದ್ದ ಕಾರಣ, ಹೊಸ ಮೀಟರ್ ಅಳವಡಿಸಲಾಗಿತ್ತು. ಈ ಮೀಟರ್ ಅಳವಡಿಕೆಯ ನಂತರ ವಿದ್ಯುತ್ ಬಿಲ್ ಸಾಧಾರಣಕ್ಕಿಂತ ಕಡಿಮೆ ಬರುತ್ತಿತ್ತು. ಈ ಸಂಬAಧ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪ್ರತಿ ತಿಂಗಳು ಸುಮಾರು ರೂ.೫೦೦ ರಿಂದ ರೂ. ೭೦೦ ರಷ್ಟು ಬಿಲ್ ಬರುತ್ತಿತ್ತು. ಇದೀಗ ೧ ಲಕ್ಷದಷ್ಟು ಬಂದಿದ್ದು ಅಚ್ಚರಿ ಮೂಡಿಸಿದೆ ಎಂದು ಗ್ರಾಹಕರು ತಿಳಿಸಿದ್ದಾರೆ.
ರೀಡಿಂಗ್ನಲ್ಲಾದ ಎಡವಟ್ಟು
ಈ ಬಗ್ಗೆ ಸೆಸ್ಕ್ ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದು, ಗ್ರಾಹಕರ ಮನೆಯಲ್ಲಿನ ಮೀಟರ್ ಸ್ವಲ್ಪ ಎತ್ತರದಲ್ಲಿರುವುದರಿಂದ ಮೀಟರ್ ರೀಡಿಂಗ್ ಸಂದರ್ಭ ವ್ಯತ್ಯಾಸವಾಗಿದೆ. ಸುಮಾರು ೩ ವರ್ಷಗಳಿಂದ ಇದೇ ರೀತಿ ಆಗಿದ್ದು, ರೀಡಿಂಗ್ನಲ್ಲಿನ ಕೊನೆಯ ಅಂಕಿ ಬಿಟ್ಟುಹೋಗುತ್ತಿತ್ತು. ಆದ್ದರಿಂದ ಗ್ರಾಹಕರ ವಿದ್ಯುತ್ ಬಳಕೆ ೨೫೦ ರಿಂದ ೩೦೦ ಯೂನಿಟ್ ಎಂದಿದ್ದರೆ, ಕೇವಲ ೨೦, ೩೦ ಯೂನಿಟ್ನಂತೆ ರೀಡಿಂಗ್ ಮಾಡುವಾತ ತಪ್ಪಾಗಿ ನಮೂದಿಸುತ್ತಿದ್ದ. ಆದ್ದರಿಂದ ಬಿಲ್ ಮೊತ್ತ ಕೂಡ ಅತ್ಯಂತ ಕಡಿಮೆ ಬರುತ್ತಿತ್ತು. ಇದೀಗ ಮೀಟರ್ ಓದುವವರು ಬದಲಾದ ಬಳಿಕ ರೀಡಿಂಗ್ ಸರಿಯಾಗಿ ಆಗುತ್ತಿದೆ. ಹಳೆಯ ಬಾಕಿ ಇರುವ ಮೊತ್ತವನ್ನೂ ಸೇರಿಸಿ ಒಟ್ಟು ರೂ. ೧,೦೫,೩೨೨ ಬಿಲ್ ಮಾಡಲಾಗಿತ್ತು. ಇದನ್ನು ಮತ್ತೆ ಪರಿಷ್ಕರಿಸಿ ೩ ವರ್ಷಗಳ ಹಿಂದಿನ ದರದಲ್ಲಿ ಸುಮಾರು ರೂ. ೭೪,೦೦೦ಕ್ಕೆ ಇಳಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.