ಕುಶಾಲನಗರ, ನ. ೯: ಕುಶಾಲನಗರ ವಲಯದ ಆನೆಕಾಡು ಮೀಸಲು ಅರಣ್ಯ ಪ್ರದೇಶದಿಂದ ಅಕ್ರಮವಾಗಿ ತೇಗದ ಮರ ಕಡಿದು ನಾಟಾಗಳನ್ನು ಸಾಗಿಸಿದ ಸಂಬAಧ ಇಬ್ಬರು ಆರೋಪಿಗಳನ್ನು ಅರಣ್ಯ ಸಿಬ್ಬಂದಿಗಳು ಮಾಲು ಸಮೇತ ಬಂಧಿಸಿದ್ದಾರೆ. ಆನೆಕಾಡು ಅರಣ್ಯದಿಂದ ಅಕ್ರಮವಾಗಿ ತೇಗದ ಮರದ ನಾಟಾಗಳನ್ನು ವಾಹನದಲ್ಲಿ ಸಾಗಿಸಿ ಬೊಳ್ಳೂರು ಗ್ರಾಮದ ಬಿ.ಎಸ್. ಪ್ರಕಾಶ್ ಅವರ ಮನೆಯ ಬಳಿ ದಾಸ್ತಾನು ಮಾಡಿರುವ ಖಚಿತ ಮಾಹಿತಿ ಆಧರಿಸಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಜೆ. ಅನನ್ಯ ಕುಮಾರ್ ನೇತೃತ್ವದಲ್ಲಿ ದಾಳಿ ಮಾಡಿದ ಸಿಬ್ಬಂದಿ ರೂ. ೨ ಲಕ್ಷ ಬೆಲೆ ಬಾಳುವ ತೇಗದ ಮೂರು ನಾಟಾಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬAಧಿಸಿದAತೆ ವಾಹನ ಚಾಲಕ ರಸಲ್‌ಪುರ ಗ್ರಾಮದ ಎಂ. ಪ್ರೇಮಕುಮಾರ್ (೨೭), ಬೊಳ್ಳೂರು ಗ್ರಾಮದ ಬಿ.ಎಸ್. ಪ್ರಕಾಶ್ (೫೫) ಅವರನ್ನು ಬಂಧಿಸಿದ್ದಾರೆ. ಅರಣ್ಯ ಕಾಯ್ದೆ ಪ್ರಕಾರ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ.
ಮಡಿಕೇರಿ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಹಾಗೂ ಸೋಮವಾರಪೇಟೆ ವಿಭಾಗದ ಸಹಾಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರೂ ಮಾರ್ಗದರ್ಶನದಲ್ಲಿ ಡಿಆರ್‌ಎಫ್‌ಓ ಕೆ.ಎನ್. ದೇವಯ್ಯ, ಅನಿಲ್ ಡಿಸೋಜ, ಕೆ.ಪಿ. ರಂಜನ್, ಅರಣ್ಯ ರಕ್ಷಕ ನಾಟಕಾರ, ವಾಹನ ಚಾಲಕ ಜೇಮ್ಸ್ ಹಾಗೂ ಆರ್.ಆರ್.ಟಿ. ಸಿಬ್ಬಂದಿಗಳು ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.