ಗೋಣಿಕೊಪ್ಪ ವರದಿ, ನ. ೧೦ : ಮೊಬೈಲ್ ಅತಿಯಾದ ಬಳಕೆಯಿಂದ ಮಾನಸಿಕ, ದೈಹಿಕ ಮತ್ತು ಸಾಮಾಜಿಕವಾಗಿ ಸಮಸ್ಯೆ ಎದುರಿಸುವಂತಾಗಿದೆ ಎಂದು ಸಿಮ್ಕಾನ್ ಫೌಂಡೇಷನ್ ನಿರ್ದೇಶಕ ಪಿ. ಎನ್. ಆದರ್ಶ್ಗೌಡ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಸೇವಾ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪೊಲೀಸ್ ಇಲಾಖೆ ಮತ್ತು ಪೊನ್ನಂಪೇಟೆ ವಕೀಲರ ಸಂಘದ ಸಹಯೋಗದಲ್ಲಿ ಪೊನ್ನಂಪೇಟೆ ನ್ಯಾಯಾಲಯದಲ್ಲಿ ಅಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದಡಿ
ಆಯೋಜಿಸಿದ್ದ ಮೊಬೈಲ್ ಬಳಕೆಯ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮೊಬೈಲ್ ಬಳಕೆ ಸಾಧಕ - ಬಾಧಕ ಅರಿತು ಮುಂದುವರಿಯಬೇಕಿದೆ. ಹೆಚ್ಚಾದ ಅವಲಂಬನೆಯಿAದ ಸಾಕಷ್ಟು ಮಾನಸಿಕ, ದೈಹಿಕ ರೋಗ ಕಾಣಿಸುತ್ತಿರುವುದು ದೃಢಪಟ್ಟಿದೆ. ಸಾಮಾಜಿಕವಾಗಿ ಕೂಡ ಸಮಸ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ತಜ್ಞರ ಸಲಹೆ ಪಾಲಿಸುವುದರಿಂದ ಮಾನಸಿಕ, ದೈಹಿಕ ಸಮಸ್ಯೆಯಿಂದ ದೂರ ಉಳಿಯಲು ಅವಕಾಶವಿದೆ.
ಅತೀಯಾದ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಏಕಾಗ್ರತೆ ಕೊರತೆ ಕಾಡುತ್ತಿದೆ. ಸಿವಿಲ್ ನ್ಯಾಯಾದೀಶ ಬಿ. ಗಿರಿಗೌಡ ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿ, ಮೊಬೈಲ್ ದುಷ್ಪರಿಣಾಮ ಅರಿತು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು. ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಕಳಕಂಡ ಡಿ. ಮುತ್ತಪ್ಪ, ವೀರಾಜಪೇಟೆ ಅಪರ ಸರ್ಕಾರಿ ವಕೀಲ ಸಿ. ಬಿ. ಅನಿತ, ಪೊನ್ನಂಪೇಟೆ ಸಹಾಯಕ ಸರ್ಕಾರಿ ಅಭಿಯೋಜಕ ಅಮೃತ್ ಸೋಮಯ್ಯ, ಸಿಮ್ಕಾನ್ ಫೌಂಡೇಷನ್ ಯೋಜನಾಧಿಕಾರಿ ರಾಜೇಶ್ನಾಯಕ್ ಇದ್ದರು.