ಮಡಿಕೇರಿ, ನ. ೧೦: ಕೊಡಗಿನ ವಿವಿಧೆಡೆ ಬಿಡುಗಡೆಗೊಂಡು ಜನಮೆಚ್ಚುಗೆ ಪಡೆದ "ನಾಡ ಪೆದ ಆಶಾ" ಕೊಡವ ಚಲನಚಿತ್ರ ಮೈಸೂರಿನ ಕೊಡವ ಸಮಾಜದಲ್ಲಿ ಯಶಸ್ವೀ ೧೦೦ನೇ ಪ್ರದರ್ಶನವನ್ನು ಕಂಡಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರು ಕೊಡವ ಸಮಾಜದ ಅಧ್ಯಕ್ಷ ಕೇಕಡ ಎಂ. ಬೆಳ್ಯಪ್ಪ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸಹಕಾರಿ ಯಾಗಿರುವ ಕೊಡವ ಸಿನಿಮಾಗಳಿಗೆ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.
ಚಿತ್ರದ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಚಿತ್ರ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್, ಮತ್ತೊಬ್ಬ ನಿರ್ಮಾಪಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಮಾತನಾಡಿದರು.
ಕೊಡವ ಸಮಾಜದ ಉಪಾಧ್ಯಕ್ಷ ಮೇಚಂಡ ಎಂ. ಪೊನ್ನಪ್ಪ, ಕಾರ್ಯದರ್ಶಿ ಮಲಚ್ಚಿರ ಎಂ. ಪೊನ್ನಪ್ಪ, ಖಜಾಂಚಿ ಮುಕ್ಕಾಟಿರ ಬಿ. ಜೀವನ್, ಗಾಯಕ ಜಗಮೊಣ್ಣಪ್ಪ, ನಟರುಗಳಾದ ತೆನ್ನಿರ ಕೈಲಾಶ್ ಕುಟ್ಟಪ್ಪ, ಮಾಚಂಗಡ ಶರತ್ ಬೋಪಣ್ಣ, ಪ್ರಮುಖರಾದ ಈರಮಂಡ ವಿಜಯ್ ಉತ್ತಯ್ಯ ಮತ್ತಿತರರು ಉಪಸ್ಥಿತರಿದ್ದರು. ನಾಯಕ ನಟ ಬೊಳ್ಳಜಿರ ಬಿ. ಅಯ್ಯಪ್ಪ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಕೀತಿಯಂಡ ಕಾವ್ಯ ಕುಟ್ಟಪ್ಪ ಪ್ರಾರ್ಥಿಸಿದರು.
ಕನ್ನಡ ಸೇರಿದಂತೆ ಬಹುಭಾಷಾ ಚಲನಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿ ಗಮನ ಸೆಳೆದಿರುವ ತೆನ್ನಿರ ಕೈಲಾಶ್ ಕುಟ್ಟಪ್ಪ ಅವರನ್ನು "ನಾಡ ಪೆದ ಆಶಾ" ಚಿತ್ರತಂಡ ಇದೇ ಸಂದರ್ಭ ಸನ್ಮಾನಿಸಿ ಗೌರವಿಸಿತು. ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿಸಿದ ಚಿತ್ರತಂಡ ಶ್ರದ್ಧಾಂಜಲಿ ಅರ್ಪಿಸಿತು.