ಮಡಿಕೇರಿ, ನ. ೮: ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಯಾದ ಪದ್ಮಶ್ರೀ ಬಿರುದನ್ನು ಕೊಡಗು ಜಿಲ್ಲೆ ಮೂಲದ ಹೆಮ್ಮೆಯ ಕ್ರೀಡಾಪಟು ಡಾ. ಮೊಳ್ಳೇರ ಪಿ. ಗಣೇಶ್ ಅವರಿಗೆ ರಾಷ್ಟçಪತಿ ರಾಮನಾಥ್ ಕೋವಿಂದ್ ಪ್ರದಾನ ಮಾಡಿದರು.
ನವದೆಹಲಿಯ ರಾಷ್ಟçಪತಿ ಭವನದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಬಿರುದನ್ನು ಪ್ರದಾನ ಮಾಡಲಾಯಿತು. ಗಣೇಶ್ ಅವರು ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು ಪ್ರಶಸ್ತಿ ಸ್ವೀಕರಿಸಿದರು.
ಶಿಕ್ಷಣ ಕ್ಷೇತ್ರದ ಸಾಧಕಿ ಹಾಗೂ ಸಮಾಜ ಸೇವಕಿ ಕೋದಂಡ ರೋಹಿಣಿ ಅವರ ಬಳಿಕ ಗಣೇಶ್ ಅವರಿಗೆ ಪದ್ಮಶ್ರೀ ಲಭಿಸಿದ್ದು, ಪದ್ಮಶ್ರೀ ಪಡೆದ ಕೊಡಗಿನ ೨ನೇ ವ್ಯಕ್ತಿ ಇವರಾಗಿದ್ದಾರೆ. ಹಾಕಿಪಟುವಾಗಿರುವ ಗಣೇಶ್ ಅವರು, ೧೯೬೯ ರಿಂದ ೭೪ರ ತನಕ ೧೦೦ಕ್ಕೂ ಹೆಚ್ಚು ಪಂದ್ಯಾವಳಿಯನ್ನು ಆಡಿದ್ದಾರೆ. ೧೯೭೨ ರ ಮ್ಯೂನಿಚ್ ಒಲಂಪಿಕ್ಸ್ ಕಂಚು ವಿಜೇತ ಭಾರತ ತಂಡದ ಸದಸ್ಯರಾಗಿ ಹಾಗೂ ೧೯೭೧ರ ಹಾಕಿ ವಿಶ್ವಕಪ್ನಲ್ಲಿ ಕಂಚು, ೧೯೭೩ರಲ್ಲಿ ಬೆಳ್ಳಿ ಪದಕ ಗಳಿಸಿಕೊಂಡಿದ್ದರು. ಅಲ್ಲದೆ ಏಷ್ಯಾಡ್ನಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಅಲ್ಲದೆ ಭಾರತೀಯ ಸೇನೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಕ್ರೀಡಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಪದ್ಮಶ್ರೀ ಗಣೇಶ್, ಕರ್ನಾಟಕದಲ್ಲಿ ಕ್ರೀಡಾ ವಸತಿ ನಿಲಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಸಿ.ಇ.ಓ, ಸಾಯಿ ನಿರ್ದೇಶಕರಾಗಿದ್ದರು. ಮೂಲತಃ ಸುಂಟಿಕೊಪ್ಪದ ಅಂದಗೋವೆಯವರಾದ ಗಣೇಶ್ ಪ್ರಸ್ತುತ ಮಾಯಮುಡಿ ಸಮೀಪದ ಕೋಣನಕಟ್ಟೆಯಲ್ಲಿ ನೆಲೆಸಿದ್ದಾರೆ.