ಗೋಣಿಕೊಪ್ಪಲು. ನ. ೮: ಪಟ್ಟಣದಲ್ಲಿ ಸಂಗ್ರಹವಾಗುವ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಗಟ್ಟಲು ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿಯು ಕಠಿಣ ನಿರ್ಧಾರವನ್ನು ಕೈಗೊಂಡಿದೆ. ಈಗಾಗಲೇ ಅಮ್ಮತ್ತಿ ಹೊಸೂರು ರಸ್ತೆಯಲ್ಲಿ ಸಂಗ್ರಹವಾಗಿದ್ದ ಕಸದ ರಾಶಿಗೆ ಮುಕ್ತಿ ಕಾಣಿಸಿದ ಪಂಚಾಯಿತಿ ನಿಗದಿತ ಸ್ಥಳದಲ್ಲಿ ಕಸವನ್ನು ಸಂಗ್ರಹಿಸಲು ವ್ಯವಸ್ಥೆ ಕಲ್ಪಿಸಿದೆ. ನಗರವನ್ನು ಸಂಪೂರ್ಣ ಕಸ ಮುಕ್ತ ಗ್ರಾಮವನ್ನಾಗಿ ಮಾಡಲು ಪಂಚಾಯಿತಿಯ ಆಡಳಿತ ಮಂಡಳಿ ಪಣತೊಟ್ಟಿದ್ದು ಈ ಬಗ್ಗೆ ಹಲವು ಕಠಿಣ ನಿರ್ಧಾರಗಳನ್ನು ಕೈಗೆತ್ತಿಕೊಂಡಿದೆ.

(ಮೊದಲ ಪುಟದಿಂದ) ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದು ಈಗಾಗಲೇ ಮೂರು ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಪಂಚಾಯಿತಿ ಜಾಗದಲ್ಲಿ ದುರ್ನಾತ ಬೀರುತ್ತಿದ್ದ ಕಸದ ರಾಶಿಯನ್ನು ಸ್ವಚ್ಛಗೊಳಿಸಿ ಈ ಭಾಗಕ್ಕೆ ಗುಣಮಟ್ಟದ ಶೀಟ್ ಮಾದರಿಯಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಅಲ್ಲದೆ ಸಾರ್ವಜನಿಕರು ಕಸವನ್ನು ಮತ್ತೆ ಎಸೆಯದಂತೆ ಎಚ್ಚರ ವಹಿಸಲು ಸ್ಥಳದಲ್ಲಿ ೨ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದಕ್ಕೂ ಮೀರಿ ಸಾರ್ವಜನಿಕರು ಕಸ ಹಾಕುವುದು ಕಂಡುಬAದಲ್ಲಿ ಪಂಚಾಯಿತಿ ವತಿಯಿಂದ ರೂ. ೫ ಸಾವಿರ ದಂಡ ವಿಧಿಸಲು ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಂಡಿರುವುದಾಗಿ ಪಂಚಾಯಿತಿ ಅಧ್ಯಕ್ಷ ಕೆ.ಬಿ. ಕೆ.ಬಿ. ನಾಣಯ್ಯ ತಿಳಿಸಿದರು.

ನಗರದಲ್ಲಿ ವಾರದ ಎರಡು ದಿನಗಳು ಪಂಚಾಯಿತಿ ವತಿಯಿಂದ ಪೌರ ಕಾರ್ಮಿಕರು ಕಸವನ್ನು ಸಂಗ್ರಹಿಸುತ್ತಾರೆ. ಸಾರ್ವಜನಿಕರು ಕಸವನ್ನು ಹಸಿ ಹಾಗೂ ಒಣ ಕಸವನ್ನು ವಿಂಗಡಿಸಿ ಪಂಚಾಯಿತಿಯ ವಾಹನಕ್ಕೆ ನೀಡಬೇಕು. ಸಾಧ್ಯವಾಗದಿದ್ದಲ್ಲಿ ಪಂಚಾಯಿತಿಯ ಆವರಣದಲ್ಲಿ ಕಸ ವಿಲೇವಾರಿಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿಗೆ ನೇರವಾಗಿ ಕಸವನ್ನು ಬೇರ್ಪಡಿಸಿ ನೀಡಬಹುದಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ಪ್ರಧಾನಿ ಮೋದಿಯವರ ಸ್ವಚ್ಛ ಭಾರತ್ ಕನಸಿನಂತೆ ಗ್ರಾಮವನ್ನು ಕಸ ಮುಕ್ತವಾಗಿಸಲು ಹಂತ ಹಂತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾ.ಪಂ. ಉಪಾಧ್ಯಕ್ಷ ಮುಕ್ಕಾಟೀರ ಬೋಪಣ್ಣ ತಿಳಿಸಿದರು. ನಗರದಲ್ಲಿ ಪ್ಲಾಸ್ಟಿಕ್ ನಿಷೇಧಿಸಲು ಕ್ರಮಕೈಗೊಳ್ಳಲಾಗಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವವರು ಪ್ಲಾಸ್ಟಿಕ್ ತಟ್ಟೆಯ ಬದಲು ಅಡಿಕೆ ಪಾಳೆಯಗಳನ್ನು ಅಥವಾ ಫೈಬರ್ ತಟ್ಟೆಗಳನ್ನು ಬಳಸುವಂತೆ ತಿಳಿಸಿದರು.

ನಾಲ್ಕು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಂಚಾಯಿತಿಯಲ್ಲಿ ನಾಲ್ಕು ವಾರ್ಡ್ಗಳಿದ್ದು ವಾರದ ಎರಡು ದಿನಗಳು ಸ್ವಚ್ಛಗಾರರು ಪಂಚಾಯಿತಿ ವಾಹನದಲ್ಲಿ ಕಸವನ್ನು ಸಂಗ್ರಹಿಸಲಿದ್ದಾರೆ. ಸಾರ್ವಜನಿಕರು ಸಹಕರಿಸಬೇಕೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿತೀನ್ ತಿಳಿಸಿದರು. ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ರತ್ನ, ಅಭಿಜಿತ್, ಸಮೀರ, ಸಲೀನ, ಹಂಸ, ಯಶೋಧ, ಪಾರ್ವತಿ, ಮಂದಣ್ಣ, ಉಪಸ್ಥಿತರಿದ್ದರು. -ಹೆಚ್.ಕೆ. ಜಗದೀಶ್