*ಸಿದ್ದಾಪುರ, ನ.೭: ಕೊಡಗಿನ ಕಾಫಿ ಬೆಳೆಗಾರರನ್ನು ಪ್ರಕೃತಿಯೊಂದಿಗೆ ವನ್ಯಜೀವಿಗಳು ಕೂಡ ನಿರಂತರವಾಗಿ ಕಾಡುತ್ತಲೇ ಇವೆ. ಹವಾಗುಣ ವೈಪರೀತ್ಯದಿಂದ ನಲುಗಿ ಹೋಗಿರುವ ಬೆಳೆಗಾರರು ದಾಳಿ ಮಾಡುತ್ತಿರುವ ಸಾಲು ಸಾಲು ಕಾಡು ಪ್ರಾಣಿಗಳ ಸವಾಲನ್ನು ಕೂಡ ಎದುರಿಸಬೇಕಾಗಿದೆ.
ಹುಲಿ, ಕಾಡಾನೆ, ಕಾಡೆಮ್ಮೆ, ಕಾಡು ಹಂದಿಗಳ ಉಪಟಳದಿಂದ ಬೇಸತ್ತಿದ್ದ ಬೆಳೆಗಾರರಿಗೆ ಇದೀಗ ಹೊಸ ಅತಿಥಿಗಳಿಂದ ತಲೆ ನೋವು ಶುರುವಾಗಿದೆ. ವಾಲ್ನೂರು, ತ್ಯಾಗತ್ತೂರು, ಅಭ್ಯತ್ ಮಂಗಲ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ತೋಟಗಳಲ್ಲಿ ವಾನರ ಸೈನ್ಯ ನೆಲೆ ನಿಂತು ನಷ್ಟ ಉಂಟು ಮಾಡಲು ಆರಂಭಿಸಿವೆ. ನೂರಾರು ಸಂಖ್ಯೆಯಲ್ಲಿ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಡುತ್ತಿರುವ ಮಂಗಗಳು ಕಾಫಿ ಗಿಡಗಳ ಮೇಲೆ ಸರ್ಕಸ್ ಮಾಡುತ್ತಿವೆ. ಕಾಫಿ ಹಣ್ಣನ್ನು ತಿಂದು ತೇಗುತ್ತಿರುವ ಇವುಗಳಿಂದ ಬೆಳೆಗಾರರಿಗೆ ಅಪಾರ ನಷ್ಟ ಉಂಟಾಗುತ್ತಿದೆ.
ಹಣ್ಣು ತುಂಬಿದ ಕಾಫಿ ಗಿಡದ ರೆಂಬೆಗಳನ್ನು ಮುರಿದು ಕೊಂಡೊಯ್ಯುವ ಮಂಗಗಳು ಎತ್ತರದ ಮರಗಳ ಮೇಲೆ ಕುಳಿತು ಹಣ್ಣುಗಳನ್ನು ಭಕ್ಷಿಸುತ್ತವೆ. ಇದರಿಂದ ಕಾಫಿ ನಷ್ಟವಾಗುವುದಲ್ಲದೆ ಗಿಡಗಳಿಗೂ ಹಾನಿಯಾಗುತ್ತಿದೆ. ಬೆದರಿಸಿ ಓಡಿಸಿದರೂ ಮತ್ತೆ ಬಂದು ತೋಟ ಸೇರಿಕೊಳ್ಳುವ ವನ್ಯಜೀವಿಗಳ ಹಿಂಡು ಯಾವುದೇ ಹಣ್ಣು, ತರಕಾರಿಗಳನ್ನು ಉಳಿಸುತ್ತಿಲ್ಲ. ಎಲ್ಲವನ್ನೂ ಕಿತ್ತು ತಿನ್ನುತ್ತಿದ್ದು, ಬೆಳೆಗಾರರು ಅಸಹಾಯಕರಾಗಿದ್ದಾರೆ.
ಇದು ಆತಂಕಕಾರಿ ಬೆಳವಣಿಗೆ ಎಂದು ವ್ಯಾಖ್ಯಾನಿಸಿರುವ ಸ್ಥಳೀಯ ನಿವಾಸಿಗಳು ಕೃಷಿಕ ವರ್ಗದ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಿರಂತರ ಮಳೆ ಮತ್ತು ಕಾಡಾನೆಗಳ ದಾಳಿಯಿಂದ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದು, ಇದೀಗ ಮಂಗಗಳು ಕೂಡ ಕಾಫಿ ಹಣ್ಣನ್ನೇ ತಿಂದು ನಾಶ ಮಾಡುತ್ತಿವೆ. ಇದು ಹೀಗೆ ಮುಂದುವರೆದರೆ ಕಾಫಿ ಬೆಳೆಯುವುದನ್ನೇ ನಿಲ್ಲಿಸಬೇಕಾಗುತ್ತದೆ ಎಂದು ಬೆಳೆಗಾರರು ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಪ್ರಾಕೃತಿಕ ವಿಕೋಪ ಸಂಭವಿಸಿ ನಷ್ಟ ಅನುಭವಿಸುತ್ತಿದ್ದರೂ ಇಲ್ಲಿಯವರೆಗೆ ಸರಕಾರ ಸೂಕ್ತ ಪರಿಹಾರವನ್ನು ನೀಡಿಲ್ಲ. ವನ್ಯಜೀವಿಗಳ ದಾಳಿಯಿಂದ ಬೆಳೆಹಾನಿಯಾದರೂ ಪರಿಹಾರ ದೊರೆಯುತ್ತಿಲ್ಲ. ಇದೀಗ ಕಾಣಿಸಿ ಕೊಂಡಿರುವ ಮಂಗಗಳ ಹಿಂಡು ಕೈಗೆ ಬಂದ ತುತ್ತನ್ನು ಬಾಯಿಗೆ ಬಾರದಂತೆ ಮಾಡುತ್ತಿವೆ. ಕೊಡಗಿನಲ್ಲಿ ಕೃಷಿಕರು ಜೀವನ ನಡೆಸುವುದೇ ಕಷ್ಟವಾಗಿದ್ದು, ಸ್ಥಳೀಯ ಸಂಸದರು ಹಾಗೂ ಶಾಸಕರು ಈ ಬಗ್ಗೆ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಬೇಕು. ಅಲ್ಲದೆ ಬೆಳೆಗಾರರ ಪರವಾಗಿ ಹೋರಾಟವನ್ನು ರೂಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
-ಅಂಚೆಮನೆ ಸುಧಿ