ಮಡಿಕೇರಿ, ನ. ೭: ‘ಮನುಷ್ಯನಿಗಾಗಿಯೇ ಈ ಜಗತ್ತು ಇರುವುದು. ಮನುಷ್ಯನೇ ಇಲ್ಲದಿದ್ದರೆ ಈ ಜಗತ್ತು ಶೂನ್ಯ’ ಎಂದು ಜಮಾತೆ ಇಸ್ಲಾಮೀ ಹಿಂದ್‌ನ ಕಾರ್ಯದರ್ಶಿ ಅಕ್ಬರ್ ಅಲಿ ಪ್ರತಿಪಾದಿಸಿದರು.

ನಗರದ ಸಿ.ಪಿ.ಸಿ. ಲೇಔಟ್‌ನ ಕಾರುಣ್ಯ ಸದನದಲ್ಲಿ ಜಮಾತೆ ಇಸ್ಲಾಮೀ ಹಿಂದ್‌ನಿAದ ಆಯೋಜಿಸಿದ್ದ ಪ್ರವಾದಿ ಮಹಮ್ಮದ್ ಅತ್ಯುತ್ತಮ ಮಾದರಿ ಅಭಿಯಾನದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಗತ್ತು ಯಾವುದೇ ಧರ್ಮಕ್ಕೆ ಸೀಮಿತ ಅಲ್ಲ. ಸೃಷ್ಟಿಕರ್ತ ಒಂದೇ ಧರ್ಮ ಸೃಷ್ಟಿಸಿದ್ದರು. ಆದರೆ, ನಾವು ಬೇರೆ ಬೇರೆ ಮಾಡಿಕೊಂಡೆವು. ಅವನು ಬಯಸಿದ್ದರೆ ನಮ್ಮೆಲ್ಲರನ್ನೂ ಒಂದೇ ಧರ್ಮಕ್ಕೆ ಸೀಮಿತ ಮಾಡಬಹುದಿತ್ತು. ಜಗತ್ತಿನ ಸೃಷ್ಟಿಯೂ ದೊಡ್ಡ ಕೆಲಸ. ಭೂಮಿಯ ಮೇಲೆ ೮೦೦ ಕೋಟಿಯಷ್ಟು ಜನರಿದ್ದಾರೆ. ನದಿ, ಮನೆ, ಪ್ರಾಣಿ, ಶಿಖರ, ಕೃಷಿ ಭೂಮಿ ಇದೆ. ಈ ನಡುವೆಯೂ ಭೂಮಿಗಳಿವೆ. ಇದು ನಿಸರ್ಗದ ಕ್ರಿಯೆ. ಇದಕ್ಕೆ ಸರ್ಕಾರದ ಅಗತ್ಯವಿಲ್ಲ. ಆದರೆ, ವಾಸ್ತವ ಸ್ಥಿತಿ ಅರ್ಥೈಸಿಕೊಳ್ಳಲು ನಾವೆಲ್ಲರೂ ವಿಫಲರಾಗಿದ್ದೇವೆ. ಅದಕ್ಕೆ ದ್ವೇಷ ಹೆಚ್ಚಾಗಿದೆ’ ಎಂದು ನೋವು ವ್ಯಕ್ತಪಡಿಸಿದರು.

‘ಪ್ರವಾದಿಗಳು ಸಾರಿದ್ದು ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೆಂದು. ಆದರೆ, ಪೋಷಕರನ್ನೇ ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದೇವೆ. ತಂದೆ-ತಾಯಿಗಳ ಬಗ್ಗೆ ಅನುಕಂಪವೂ ಇಲ್ಲ. ಕಾಳಜಿಯೂ ಇಲ್ಲ. ಪೋಷಕರನ್ನೇ ಆಶ್ರಮಕ್ಕೆ ಸೇರಿಸುವ ಜನರು ಇರಬೇಕಾದರೆ, ಅವರು ಸಮಾಜದ ಸ್ವಾಸ್ಥö್ಯ ಕಾಪಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಜಿಲ್ಲಾ ಸಂಚಾಲಕ ಪಿ.ಕೆ.ಅಬ್ದುಲ್ ರೆಹಮಾನ್ ಅವರು, ‘ಕೋವಿಡ್ ಹಾಗೂ ಲಾಕ್‌ಡೌನ್‌ನಿಂದ ಕತ್ತಲೆಯಲ್ಲಿ ನಾವಿದ್ದೇವೆ. ಹಬ್ಬಗಳು ಬದುಕು ನವೀಕರಿಸುತ್ತವೆ. ಸಾಕಷ್ಟು ಕಷ್ಟ ಬಂದಿದೆ. ಹಬ್ಬಗಳು ನಮ್ಮ ಕಷ್ಟಗಳನ್ನು ನಿವಾರಿಸಬೇಕು’ ಎಂದು ಹೇಳಿದರು.

ಪೈಗಂಬರ್ ಅವರೂ ಸಂಕಷ್ಟಕ್ಕೆ ಒಳಗಾಗಿದ್ದರು. ಕಡಿಮೆ ಸಮಯದಲ್ಲಿ ಸಮಾಜದಲ್ಲಿ ಬದಲಾವಣೆ ತಂದರು. ಕಾರ್ಮಿಕರ ಪರವಾಗಿ ಕೆಲಸ ಮಾಡಿದ್ದರು. ಕಾರ್ಮಿಕರಿಗೆ ದುಡಿಮೆಗೆ ತಕ್ಕ ಹಣ ನೀಡಿ ಎನ್ನುವ ಹೋರಾಟ ಸಹ ನಡೆಸಿದ್ದರು ಎಂದು ಹೇಳಿದರು.

ನಗರಸಭೆ ಸದಸ್ಯ ಬಿ.ವೈ. ರಾಜೇಶ್ ಮಾತನಾಡಿ, ‘ಸಮಾಜದ ದಿಕ್ಕು ಬದಲಾವಣೆ ಆಗಿದೆ. ಹೃದಯ ಶ್ರೀಮಂತಿಕೆಯೇ ದೊಡ್ಡದೆಂದು ಪ್ರವಾದಿ ಪ್ರತಿಪಾದಿಸಿದ್ದರು. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಿದ್ದರು. ಮಹಾಭಾರತ, ಕುರಾನ್, ಬೈಬಲ್‌ನ ಸಂದೇಶಗಳು ಒಂದೇ. ಎಲ್ಲರ ರಕ್ತವೂ ಒಂದೇ ಬಣ್ಣ. ಆದರೆ, ರಾಜಕೀಯ ಕಾರಣಕ್ಕೆ ದ್ವೇಷ ಬಿತ್ತುವ ಕೆಲಸವಾಗುತ್ತಿದೆ ಎಂದ ಅವರು, ಮಾನವೀಯ ಮೌಲ್ಯ ಇರಬೇಕು. ಸತ್ತ ನಂತರವೂ ಹೆಸರು ಚಿರಸ್ಥಾಯಿ ಆಗಿರಬೇಕಿದ್ದರೆ ಬದುಕಿದ್ದಾಗ ಒಳ್ಳೆಯ ಕೆಲಸ ಮಾಡಬೇಕು’ ಎಂದು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಮಹಮ್ಮದ್ ಮುಸ್ತಾಫ, ಈ ಸಂಘಟನೆಯು ಕಳೆದ ೭ ದಶಕಗಳಿಂದ ಕೆಲಸ ಮಾಡುತ್ತಿದೆ. ಹಿಂಸೆ, ಬೆದರಿಕೆ, ಉಗ್ರವಾದ ತಿರಸ್ಕರಿಸಿ, ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ಸಾಗುತ್ತಿದೆ. ದ್ವೇಷ ಅಳಿಯಬೇಕು. ದೇಶ ಉಳಿಯಬೇಕು ಎಂದು ಅಭಿಯಾನ ನಡೆಸಲಾಗುತ್ತಿದೆ. ಎಲ್ಲರ ನಡುವೆಯೂ ಏಕತೆ ತರುವ ಪ್ರಯತ್ನವೂ ಸಾಗುತ್ತಿದೆ ಎಂದು ಹೇಳಿದರು.

ನಿವೃತ್ತ ಸುಬೇದಾರ್ ಡೇವಿಡ್ ವೇಗಸ್, ಎಂ.ಇ. ಮಹಮ್ಮದ್, ಜಾಮೀಯ ಮಸೀದಿ ಅಧ್ಯಕ್ಷ ಮಹಮ್ಮದ್ ಇಬ್ರಾನ್, ಅಬ್ದುಲ್ ಮಡಿಕೇರಿ ಹಾಜರಿದ್ದರು. ಅದಕ್ಕೂ ಮೊದಲು ಕುರಾನ್ ಸಂದೇಶ ಓದಲಾಯಿತು.