ಕೊಡ್ಲಿಪೇಟೆ, ನ. ೭: ಕೊಡಗು-ಹಾಸನ ಗಡಿಯನ್ನು ಹೊಂದಿಕೊAಡಿರುವ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿರುವ ಪೊಲೀಸ್ ಉಪ ಠಾಣೆಯು ಕಾಯಕಲ್ಪ ಕಾಣುವ ಹಂಬಲದಲ್ಲಿದೆ.
ಗಡಿ ಭಾಗವಾಗಿರುವುದರಿಂದ ಸಹಜವಾಗಿಯೇ ಸಾರ್ವಜನಿಕರ ಓಡಾಟ, ಅಂತರ್ಜಿಲ್ಲಾ ವ್ಯವಹಾರಗಳು ಹೆಚ್ಚಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿಗೆ ಪೊಲೀಸ್ ಸಿಬ್ಬಂದಿಗಳ ನೇಮಕವೂ ಆಗಬೇಕಿದೆ.
ಕೊಡ್ಲಿಪೇಟೆ ಪಟ್ಟಣದಲ್ಲಿರುವ ಪೊಲೀಸ್ ಉಪಠಾಣೆಯು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಉಪ ಠಾಣೆಯಲ್ಲಿ ಓರ್ವರು ಎಎಸ್ಐ, ಹೆಡ್ ಕಾನ್ಸ್ಟೇಬಲ್, ಓರ್ವ ಪೇದೆಯನ್ನು ನಿಯೋಜಿಸಲಾಗಿದೆ. ಇರುವ ಮೂವರು ಪೊಲೀಸರೊಂದಿಗೆ ಈರ್ವರು ಗೃಹ ರಕ್ಷಕ ದಳದ ಸಿಬ್ಬಂದಿಗಳು ಇದ್ದಾರೆ.
ಗಡಿ ಭಾಗವಾಗಿರುವ ಹಿನ್ನೆಲೆ ಇಲ್ಲಿಗೆ ಹೆಚ್ಚುವರಿ ಪೊಲೀಸ್ ಪೇದೆಗಳ ಅವಶ್ಯಕತೆಯೂ ಇದೆ. ಇದರೊಂದಿಗೆ ಹೇಮಾವತಿ ಹಿನ್ನೀರು ಪ್ರದೇಶವನ್ನೂ ಈ ಉಪ ಠಾಣೆ ಒಳಗೊಂಡಿದ್ದು, ಅಕ್ರಮ ಮರಳು ಗಣಿಗಾರಿಕೆಗೆ ತಡೆಯೊಡ್ಡಬೇಕಾದರೆ ಸಿಬ್ಬಂದಿಗಳ ಸಂಖ್ಯೆಯೂ ಹೆಚ್ಚಳವಾಗಬೇಕಿದೆ.
ಕೊಡ್ಲಿಪೇಟೆಯು ಸದಾ ಚಟುವಟಿಕೆಯಲ್ಲಿರುವ ಪಟ್ಟಣವಾಗಿದೆ. ಸುತ್ತಮುತ್ತಲಿನ ಗ್ರಾಮೀಣ ಭಾಗದ ಮಂದಿ ತಮ್ಮ ದೈನಂದಿನ ವ್ಯವಹಾರಗಳಿಗೆ ಪಟ್ಟಣವನ್ನು ಅವಲಂಬಿಸಿದ್ದಾರೆ. ದಿನನಿತ್ಯ ಪಟ್ಟಣಕ್ಕೆ ಆಗಮಿಸುವ ವಾಹನಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಸಂತೆ ನಡೆಯುವ ಭಾನುವಾರದಂದು ಕೊಡ್ಲಿಪೇಟೆ ಪಟ್ಟಣದಲ್ಲಿ ವಾಹನಗಳ ದಟ್ಟಣೆ ಅಧಿಕವಿದ್ದು, ವಾಹನಗಳನ್ನು ಅಲ್ಲಲ್ಲಿ ಪಾರ್ಕಿಂಗ್ ಮಾಡುವುದರಿಂದ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ.
ವಾಹನ ಸಂಚಾರ ದಟ್ಟಣೆಯನ್ನು ಸುಧಾರಿಸಿ, ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಅಳವಡಿಸಲು ಪೊಲೀಸ್ ಇಲಾಖೆಗೆ ಅಸಾಧ್ಯವಾಗುತ್ತಿದೆ. ಇರುವ ಸಿಬ್ಬಂದಿಗಳು ಇತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮಗ್ನರಾದರೆ ಪಾರ್ಕಿಂಗ್ ಹಾಗೂ ಸಂಚಾರ ವ್ಯವಸ್ಥೆಯನ್ನು ಗಮನಿಸಲು ಸಾಧ್ಯವಾಗುತ್ತಿಲ್ಲ ಎಂದು ಕ್ಯಾತೆ ಗ್ರಾಮದ ಶಿವಕುಮಾರ್ ತಿಳಿಸಿದ್ದಾರೆ.
ವಸತಿ ಗೃಹ ಅವ್ಯವಸ್ಥೆ: ಕೊಡ್ಲಿಪೇಟೆ ಪೊಲೀಸ್ ಉಪಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಈ ಹಿಂದೆ ನಿರ್ಮಿಸಲಾಗಿದ್ದ ವಸತಿ ಗೃಹಗಳು ಸೂಕ್ತ ನಿರ್ವಹಣೆಯ ಕೊರತೆಯಿಂದ ಇದೀಗ ಕಾಡುಪಾಲಾಗಿವೆ. ಓರ್ವ ಎಎಸ್ಐ ಹಾಗೂ ಮೂವರು ಪೇದೆಗಳಿಗೆ ಕಳೆದ ಕೆಲ ದಶಗಳ ಹಿಂದೆಯೇ ವಸತಿ ಗೃಹ ನಿರ್ಮಿಸಲಾಗಿದೆ. ಆದರೆ ನಿರ್ವಹಣೆಯ ಕೊರತೆಯಿಂದ ವಸತಿ ಗೃಹಗಳು ಕಾಡುಪಾಲಾಗಿ ಇದೀಗ ಕುಸಿದು ಬೀಳುತ್ತಿವೆ.
ಸದ್ಯದ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು, ಉಪ ಠಾಣೆಯ ಒಂದು ಕೊಠಡಿಯಲ್ಲಿ ತಂಗುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮೂರು ಕೊಠಡಿಗಳಿರುವ ಉಪಠಾಣೆಯಲ್ಲಿ ಒಂದನ್ನು ಕಚೇರಿ ಉಪಯೋಗಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮತ್ತೊಂದರಲ್ಲಿ ಊಟ ಹಾಗೂ ವಾಸ್ತವ್ಯ, ಇನ್ನೊಂದರಲ್ಲಿ ಕಡತಗಳನ್ನು ಇಡಲಾಗಿದೆ.
ಮೇಲ್ದರ್ಜೆಗೇರಲು ಎಲ್ಲಾ ರೀತಿಯಲ್ಲೂ ಅರ್ಹತೆ (!) ಪಡೆದಿರುವ ಕೊಡ್ಲಿಪೇಟೆಯ ಉಪಠಾಣೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಇಲಾಖೆ ಹಾಗೂ ಸರ್ಕಾರ ಗಮನ ಹರಿಸಬೇಕಿದೆ. ಶಿಥಿಲಾವಸ್ಥೆಯಲ್ಲಿದ್ದ ಉಪಠಾಣೆಯ ಮೇಲ್ಛಾವಣಿಯನ್ನು ದುರಸ್ತಿಪಡಿಸಿ ಹೆಂಚುಗಳನ್ನು ಹಾಕಲಾಗಿದೆ. ಇದನ್ನು ಹೊರತುಪಡಿಸಿದರೆ ಯಾವುದೇ ಹೆಚ್ಚಿನ ಸೌಲಭ್ಯ ನೀಡಲಾಗಿಲ್ಲ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ಅವರು, ಈ ಹಿಂದೆ ಇದ್ದ ಪೊಲೀಸ್ ವಸತಿ ಗೃಹಗಳು ಶಿಥಿಲಾವಸ್ಥೆಗೆ ತಲುಪಿದ್ದರಿಂದ ವಾಸಕ್ಕೆ ಅಯೋಗ್ಯವಾಗಿದೆ. ಇದೀಗ ಜಾಗದ ಬೌಂಡರಿ ನಿಗದಿಪಡಿಸಿ ಹದ್ದುಬಸ್ತು ಮಾಡಲು ತಾಲೂಕು ತಹಶೀಲ್ದಾರ್ಗೆ ಪತ್ರ ಬರೆದಿದ್ದೇವೆ. ಇದರೊಂದಿಗೆ ಹಳೆ ಕಟ್ಟಡವನ್ನು ಕೆಡವಲು ಶಿಫಾರಸ್ಸು ಕಳುಹಿಸಲಾಗಿದೆ. ಪೊಲೀಸ್ ಉಪಠಾಣೆಯನ್ನು ಮೇಲ್ದರ್ಜೆಗೇರಿಸುವ ಸಂಬAಧ ಡಿವೈಎಸ್ಪಿ ಅವರೊಂದಿಗೆ ಚರ್ಚಿಸಲಾಗುವುದು. ಶನಿವಾರಸಂತೆಯಿAದ ಸದ್ಯದಲ್ಲಿಯೇ ಈರ್ವರು ಸಿಬ್ಬಂದಿಗಳನ್ನು ಕೊಡ್ಲಿಪೇಟೆ ಉಪಠಾಣೆಗೆ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
- ವಿಜಯ್ ಹಾನಗಲ್