ಸುಂಟಿಕೊಪ್ಪ, ನ. ೪: ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕ ಇದರ ಸುಂಟಿಕೊಪ್ಪ ಹೋಬಳಿ ಘಟಕದ ವತಿಯಿಂದ ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಇಲ್ಲಿನ ಗುಂಡುಗುಟ್ಟಿ ಮಂಜು ನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸನ್ಮಾನ ಕಾರ್ಯಕ್ರಮ ವನ್ನು ಕೊಡಗು ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್ ಉದ್ಘಾಟಿಸಿ ಮಾತನಾಡಿ, ದಲಿತ ಸಮುದಾಯದ ಜನರು ಶಿಕ್ಷಣ ಪಡೆಯುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ. ಆಗ ಮಾತ್ರ ಸಮಾಜದಲ್ಲಿ ಸಮಾನತೆ ನೆಲೆಸಲು ಸಾಧ್ಯ ಎಂದರು. ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ಎಲ್ಲರೂ ಸಂವಿಧಾನದ ಬಗ್ಗೆ ತಿಳಿಯುವ ಮೂಲಕ ಪ್ರಜ್ಞಾವಂತ ನಾಗರಿಕ ಸಮಾಜವನ್ನು ಕಟ್ಟಬೇಕು, ತಳ ಸಮುದಾಯಗಳಿಗೆ ಸಂಘಟನೆ ಗಳು ಬಲ ತುಂಬಿದಾಗ ಸಮಾಜದಲ್ಲಿ ಅಭಿವೃದ್ಧಿಯ ಬದಲಾವಣೆಗೊಳ್ಳಲು ಸಾಧ್ಯವೆಂದರು. ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಹೆಚ್.ಎಲ್ ದಿವಾಕರ್ ಪ್ರಾಸ್ತಾವಿಕ ವಾಗಿ ಮಾತನಾಡಿ, ಮುಖ್ಯವಾಹಿನಿಗೆ ಬರಬೇಕಾದರೆ ನಮ್ಮ ಸಮುದಾಯದ ವಿದ್ಯಾರ್ಥಿಗಳು ವಿದ್ಯಾವಂತರಾಗ ಬೇಕು, ಸರಕಾರಿ ಕೆಲಸ ಪಡೆಯುವ ಮೂಲಕ ಇತರರಿಗೂ ಸಹಾಯ ಮಾಡಿ ಮಾದರಿಯಾಗಬೇಕೆಂದರು. ಮಡಿಕೇರಿ ತಾಲೂಕು ಸಂಚಾಲಕ ದೀಪಕ್, ಗ್ರಾ.ಪಂ. ಸದಸ್ಯ ರಫೀಕ್ ಮಾತನಾಡಿದರು. ಜಿಲ್ಲಾ ಸಂಘಟನಾ ಸಂಚಾಲಕ ಐತಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಗೌತಮ್ ಶಿವಪ್ಪ ಉಪಸ್ಥಿತರಿದ್ದರು.