ಹೆಬ್ಬಾಲೆ, ನ. ೪: ಆಯುಷ್ ವೈದ್ಯ ಪದ್ಧತಿಗಳು ರೋಗಿಯ ರೋಗವನ್ನು ನಿವಾರಿಸುವುದರ ಜೊತೆಗೆ ರೋಗಗಳು ಬರದಂತೆ ತಡೆಗಟ್ಟಲು ಅನೇಕ ಆರೋಗ್ಯ ಸೂತ್ರಗಳನ್ನು ನೀಡಿದೆ. ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಆಯುರ್ವೇದ ಪದ್ಧತಿಯು ಬಹುಮುಖ್ಯವಾಗಿದೆ ಎಂದು ತೊರೆನೂರು ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸರಸ್ವತಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ವತಿಯಿಂದ ರಾಷ್ಟಿçÃಯ ಆರೋಗ್ಯ ಅಭಿಯಾನದಡಿಯಲ್ಲಿ ಸಮೀಪದ ತೊರೆನೂರು ಬಸವೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ಯಾವುದೇ ಅಡ್ಡ ಪರಿಣಾಮ ಇಲ್ಲದ ಆಯುರ್ವೇದ ಔಷಧಿಗಳು ನಿಧಾನವಾದರೂ ಬೇರು ಸಮೇತ ರೋಗ ನಿರ್ಮೂಲನೆ ಮಾಡುತ್ತದೆ ಎಂದರು

ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್ ಮಾತನಾಡಿ, ಎಸ್ಸಿಪಿ ಮತ್ತು ಟಿಎಸ್‌ಐ ಯೋಜನೆಯಡಿ ತೊರೆನೂರು ಗ್ರಾಮವನ್ನು ಆಯುಷ್ ಸೇವಾ ಗ್ರಾಮವಾಗಿ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಆಯುರ್ವೇದ ಚಿಕಿತ್ಸೆಗೆ ಬಹಳ ಮಹತ್ವ ಬರುತ್ತಿದ್ದು, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಹೆಚ್ಚಿನ ಚಿಕಿತ್ಸೆಯೂ ದೊರೆಯುತ್ತಿರುವುದು ಇದಕ್ಕೆ ಸಾಕ್ಷಿ ಎಂದರು.

ಕುಶಾಲನಗರ ಸರ್ಕಾರಿ ಹೋಮಿಯೋಪತಿ ವೈದ್ಯೆ ಡಾ. ಸೌಪರ್ಣಿಕಾ ಮಾತನಾಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್, ಆಸ್ಪತ್ರೆ ಸಿಬ್ಬಂದಿಗಳಾದ ರಾಜಕುಮಾರ್, ಸಚಿನ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು. ಇದೇ ಸಂದರ್ಭ ನೂರಕ್ಕೂ ಹೆಚ್ಚು ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.