ಮಡಿಕೇರಿ, ನ. ೪: ಮಕ್ಕಳ ಪಾಲನೆ, ಪೋಷಣೆ ಮತ್ತು ಸಂರಕ್ಷಣೆಗೆ ಆದ್ಯತೆ ನೀಡುವಂತಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್. ಸುಬ್ರಮಣ್ಯ ತಿಳಿಸಿದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ‘ಕೋವಿಡ್-೧೯ ಅವಧಿಯಲ್ಲಿ ಮಕ್ಕಳ ಮೇಲಾಗಿರುವ ದುಷ್ಪರಿಣಾಮಗಳ’ ಕುರಿತು ಭಾರತೀಯ ವಿದ್ಯಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ಸಾರ್ವಜನಿಕ ಅಹವಾಲು ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಬೇಕು. ಕಳೆದ ಎರಡು ವರ್ಷದಲ್ಲಿ ಕೋವಿಡ್-೧೯ ಸಾಂಕ್ರಾಮಿಕ ರೋಗವು ಪ್ರತಿಯೊಬ್ಬರನ್ನು ಕಾಡುತ್ತಿದೆ. ಕೋವಿಡ್-೧೯ ನಿಂದ ಹಲವರು ಮೃತಪಟ್ಟಿದ್ದಾರೆ. ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಮಕ್ಕಳ ಯೋಗಕ್ಷೇಮದ ಬಗ್ಗೆ ಗಮನಹರಿಸಬೇಕಿದೆ ಎಂದರು.
ನಿರ್ಗತಿಕ ಮಕ್ಕಳು ಶೋಷಣೆಗೆ ತುತ್ತಾಗುವ ಸಾಧ್ಯತೆ ಇದ್ದು, ಮಕ್ಕಳ ಮೇಲಾಗುವ ಶೋಷಣೆ ಮತ್ತು ದೌರ್ಜನ್ಯವನ್ನು ತಪ್ಪಿಸುವ ನಿಟ್ಟಿನಲ್ಲಿ ಮಕ್ಕಳ ರಕ್ಷಣೆಗೆ ಮುಂದಾಗಬೇಕಿದೆ. ನಿರ್ಗತಿಕ ಮಕ್ಕಳಿಗೆ ಪುನರ್ ವಸತಿ ಕಲ್ಪಿಸಬೇಕಿದೆ. ಕೋವಿಡ್-೧೯ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಬಗ್ಗೆ ಮಾಹಿತಿ ಇದ್ದಲ್ಲಿ ಮಹಿಳಾ ರಕ್ಷಣಾ ಘಟಕಕ್ಕೆ ಮಾಹಿತಿ ನೀಡು ವಂತಾಗಬೇಕು. ಮಕ್ಕಳಿಗೆ ಕಡ್ಡಾಯ ವಾಗಿ ಶಿಕ್ಷಣ ನೀಡಬೇಕು. ಮಕ್ಕಳ ನ್ಯಾಯ ಕಾಯ್ದೆ ಅನುಷ್ಠಾನಗೊಳಿಸಬೇಕು. ಬಾಲ್ಯ ವಿವಾಹ ನಿಷೇಧ ಮಾಡಬೇಕು. ಮಕ್ಕಳಿಗೆ ಇರುವ ಕಾನೂನು ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಮೈಸೂರು ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟಾö್ಯನ್ಲಿ ಮಾತನಾಡಿ ಮಕ್ಕಳ ಸಮಗ್ರ ಬೆಳವಣಿಗೆಗೆ ಪ್ರತಿಯೊಬ್ಬರೂ ಗಮನಿಸಬೇಕಿದೆ. ಮಕ್ಕಳು ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆ ಮತ್ತು ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪೋಷಕರು ಮುಂದಾಗಬೇಕು ಎಂದರು.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಲತೀಫ್ ಮಾತನಾಡಿ, ಕೋವಿಡ್ ಪೂರ್ವದಲ್ಲಿ ಮಕ್ಕಳು ಆಟ, ಪಾಠ, ಪ್ರವಚನ, ಹೀಗೆ ಲವ ಲವಿಕೆಯಿಂದ ಇರುತ್ತಿದ್ದರು. ಆದರೆ ಕೋವಿಡ್ ನಂತರ ಮಕ್ಕಳು ಮನೆಯಿಂದ ಹೊರ ಬರುವುದೇ ಕಷ್ಟಸಾಧ್ಯವಾಗಿದೆ. ಮಕ್ಕಳನ್ನು ಉತ್ತಮ ಪ್ರಜೆಯಾಗಿ ರೂಪಿಸಬೇಕು. ಮಕ್ಕಳ ಬಗ್ಗೆ ಪೋಷಕರು ಭ್ರಮೆಯಿಂದ ಹೊರಬರಬೇಕು. ಮಕ್ಕಳ ಜೊತೆ ಪೋಷಕರು ಬೆರೆಯಬೇಕು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ, ಒಡಿಪಿ ಸಂಸ್ಥೆಯ ಜಿಲ್ಲಾ ಸಂಯೋಜಕ ಜಾಯ್ಸ್ ಮೆನೇಜಸ್, ಶಿಕ್ಷಕ ಟಿ.ಜಿ. ಪ್ರೇಮ್‌ಕುಮಾರ್ ಇತರರು ಮಕ್ಕಳ ಪಾಲನೆ ಮತ್ತು ಪೋಷಣೆ ಬಗ್ಗೆ ಹಲವು ಸಲಹೆ ನೀಡಿದರು.