ಗೋಣಿಕೊಪ್ಪಲು, ನ. ೧: ಸರ್ಕಾರ ಕಳೆದ ೨೦ ವರ್ಷಗಳ ಹಿಂದೆ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯ ರಸ್ತೆ ಬದಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಆರೋಗ್ಯ ಉಪ ಕೇಂದ್ರವನ್ನು ಆರಂಭಿಸಿದೆ. ಸುತ್ತ ಮುತ್ತಲಿನ ಗ್ರಾಮದಲ್ಲಿ ಅಧಿಕ ಸಂಖ್ಯೆಯಲ್ಲಿ ಆದಿವಾಸಿಗಳ ಕುಟುಂಬವು ವಾಸಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡ ಸರ್ಕಾರ ಗುಣಮಟ್ಟದ ಕಟ್ಟಡವನ್ನು ನಿರ್ಮಿಸಿ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಿದೆ.ಪ್ರತಿನಿತ್ಯ ಹಲವು ಮಂದಿ ಈ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ೨೦ ವರ್ಷಗಳಿಂದ ಈ ಕಟ್ಟಡವು ಸುಣ್ಣ ಬಣ್ಣ ಕಾಣದಂತಾಗಿದೆ. ಅಲ್ಲದೆ ಆರಂಭದಲ್ಲಿ ಅಳವಡಿಸಿದ್ದ ಕಿಟಕಿ ಬಾಗಿಲುಗಳು ಹಾಳಾಗಿವೆ. ಈ ಬಗ್ಗೆ ಕ್ರಮ ವಹಿಸಬೇಕಾದ ಆರೋಗ್ಯ ಇಲಾಖೆ ಇಲ್ಲಿಯ ತನಕ ಇದರ ನಿರ್ವಹಣೆಗೆ ಮುಂದಾಗಿಲ್ಲ.
ಈ ಉಪಕೇಂದ್ರವನ್ನು ಆದಿವಾಸಿಗಳ ಅನುಕೂಲಕ್ಕಾಗಿಯೇ ಕಳೆದ ೨೦ ವರ್ಷಗಳ ಹಿಂದೆ ಸರ್ಕಾರ ಮಂಜೂರು ಮಾಡಿತ್ತು. ಲಕ್ಷಾಂತರ ಹಣವನ್ನು ವಿನಿಯೋಗಿಸಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಿತ್ತು. ಅಲ್ಲದೆ ಸಾರ್ವಜನಿಕರಿಗೆ ದಿನನಿತ್ಯದ ಸೇವೆ ನೀಡಲು ಎರಡು ಆರೋಗ್ಯ ಸಹಾಯಕರನ್ನು ಸರ್ಕಾರ ನೇಮಕ ಮಾಡಿತ್ತು. ಆರೋಗ್ಯ ಇಲಾಖೆಯಿಂದ ಸರಬರಾಜಾಗುವ ಔಷಧಗಳು ಜನರಿಗೆ ಸಮರ್ಪಕವಾಗಿ ನೀಡಲಾಗುತ್ತಿತ್ತು. ಇಂದಿಗೂ ಕೂಡ ಇಲ್ಲಿಯ ಸಿಬ್ಬಂದಿಗಳು ಹಾಡಿಗಳಿಗೆ ತೆರಳಿ ಉತ್ತಮ ಸೇವೆ ನೀಡುತ್ತಿದ್ದಾರೆ. ಕೇಂದ್ರಕ್ಕೆ ಬರುವ ರೋಗಿಗಳಿಗೆ ಪ್ರಾಥಮಿಕ ಸೇವೆಗಳು ಲಭಿಸುತ್ತಿವೆ. ಇಲ್ಲಿನ ಕಟ್ಟಡ ಗುಣಮಟ್ಟದಾಗಿದ್ದರೂ ಕಟ್ಟಡಕ್ಕೆ ಈ ಹಿಂದೆ ಅಳವಡಿಸಲಾಗಿದ್ದ ಕಿಟಕಿ ಬಾಗಿಲುಗಳು ಹಾಳಾಗಿ ಹಲವು ವರ್ಷಗಳೇ ಕಳೆದಿವೆ. ಆರೋಗ್ಯ ಉಪ ಕೇಂದ್ರಕ್ಕೆ ಸುಣ್ಣ ಬಣ್ಣ ಬಳಿಯದೆ ಅದೆಷ್ಟೋ ವರ್ಷಗಳು ಕಳೆದಿವೆ.
ಸರ್ಕಾರ ಲಕ್ಷಾಂತರ ಅನುದಾನವನ್ನು ಮಂಜೂರು ಮಾಡಿ ಇಂತಹ ಕಟ್ಟಡವನ್ನು ನಿರ್ಮಿಸಿದೆ. ಆದರೆ ಇದರ ನಿರ್ವಹಣೆ ಮಾಡಬೇಕಾದ ಇಲಾಖೆ ಇಲ್ಲಿಯ ತನಕ ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ. ವಿಸ್ತಾರವಾದ ಈ ಆರೋಗ್ಯ ಉಪ ಕೇಂದ್ರಕ್ಕೆ ಹೊಂದಿಕೊAಡAತೆ ಶೌಚಾಲಯವಿದ್ದು ಇದರ ಪರಿಸ್ಥಿತಿ ಹೇಳ ತೀರದ್ದಾಗಿದೆ. ಉಪ ಕೇಂದ್ರದ ಹಿಂಭಾಗದಲ್ಲಿರುವ ಬಾಗಿಲುಗಳು ಹಾಗೂ ಕಿಟಕಿಗಳು ಹಾಳಾಗಿದ್ದು ಸ್ವಲ್ಪ ದಿನಗಳಲ್ಲಿ ಮುರಿದು ಬೀಳುವ ಸಾಧ್ಯತೆಯಿದೆ. ಸರ್ಕಾರ ಲಕ್ಷಾಂತರ ಹಣವನ್ನು ವಿನಿಯೋಗಿಸಿ ಇಂತಹ ಸುಸಜ್ಜಿತ ಗುಣಮಟ್ಟದ ಕಟ್ಟಡ ನಿರ್ಮಿಸಿದ್ದರೂ ಕಾಲ ಕಾಲಕ್ಕೆ ಇದರ ದುರಸ್ತಿ ಕಾರ್ಯ ನಡೆಯದಿರುವುದರಿಂದ ಈ ಸಮಸ್ಯೆ ಎದುರಾಗಿದೆ.
ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಈ ಭಾಗದ ಗ್ರಾಮೀಣ ರಸ್ತೆಗಳು, ಅಭಿವೃದ್ಧಿ ಕಂಡಿವೆ. ಗಿರಿಜನರ ಹಾಡಿಗಳಲ್ಲಿ ಕುಡಿಯುವ ನೀರು, ಸೋಲಾರ್ ವ್ಯವಸ್ಥೆ ಕಲ್ಪಿಸಲಾಗಿದ್ದು ಶುಚಿತ್ವ ಕಾಪಾಡಲು ಒತ್ತು ನೀಡಲಾಗಿದೆ. ಆದರೆ ಮುಖ್ಯ ರಸ್ತೆಗೆ ಹೊಂದಿಕೊAಡAತಿರುವ ಹಳೆಯದಾದ ಆರೋಗ್ಯ ಕೇಂದ್ರದ ಕಟ್ಟಡವು ದುರಸ್ತಿ ಕಾಣದೆ ಹಲವು ವರ್ಷಗಳೇ ಕಳೆದಿದೆ. ಕೂಡಲೇ ಈ ಬಗ್ಗೆ ಆರೋಗ್ಯ ಇಲಾಖೆ ಗಮನ ಹರಿಸಿ, ಆದಿವಾಸಿಗಳ ಪ್ರಯೋಜನಕ್ಕಾಗಿ ನಿರ್ಮಿಸಿರುವ ಈ ಕಟ್ಟಡವನ್ನು ಕೂಡಲೇ ದುರಸ್ತಿಪಡಿಸಬೇಕೆಂದು ೨ ಗ್ರಾಮಸ್ಥರು ಆಗ್ರಹಿಸಿದ್ದಾರೆ.
- ಹೆಚ್.ಕೆ. ಜಗದೀಶ್, ಗೋಣಿಕೊಪ್ಪ