ಸೋಮವಾರಪೇಟೆ,ನ.೧: ಶೌಚಾಲಯದ ತ್ಯಾಜ್ಯವನ್ನು ಸಾರ್ವಜನಿಕ ಚರಂಡಿಗೆ ಹರಿಸುವ ಮೂಲಕ ಪಟ್ಟಣ ಗಬ್ಬೇರುವಂತೆ ಮಾಡಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣ ವಾಗಿದೆ.
ಪಟ್ಟಣದಲ್ಲಿರುವ ಯಾವುದೋ ಮನೆ ಅಥವಾ ಹೊಟೇಲ್‌ನ ಶೌಚಾಲಯದ ತ್ಯಾಜ್ಯ ವನ್ನು ನೇರವಾಗಿ ಸಾರ್ವಜನಿಕ ಚರಂಡಿಗೆ ಬಿಟ್ಟಿದ್ದರಿಂದ ಇಂದು ಪಟ್ಟಣ ಸೇರಿದಂತೆ ಕಕ್ಕೆಹೊಳೆ ಜಂಕ್ಷನ್ ಗಬ್ಬೆದ್ದು ನಾರುತ್ತಿತ್ತು.
ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಲಯದ ಗುಂಡಿಗಳು ತುಂಬಿದರೆ ಅದನ್ನು ಯಂತ್ರದ ಮೂಲಕ ಖಾಲಿ ಮಾಡಲಾಗುತ್ತಿದೆ. ಹೀಗೆ ಯಂತ್ರದ ಟ್ಯಾಂಕ್‌ನಲ್ಲಿ ಸಂಗ್ರಹವಾದ ಮಲಮೂತ್ರವನ್ನು ದೂರದ ಪ್ರದೇಶದಲ್ಲಿ ವಿಲೇವಾರಿ ಮಾಡುತ್ತಿದ್ದೇವೆ. ಇಂದು ಯಾವುದೋ ಮನೆಯವರು ತಮ್ಮ ಶೌಚಾಲಯದ ಗುಂಡಿ ಕ್ಯಾಪ್ ತೆಗೆದು ನೇರವಾಗಿ ಚರಂಡಿಗೆ ಬಿಟ್ಟಿದ್ದಾರೆ ಎಂದು ಶುಚಿತ್ವ ಕಾರ್ಯ ನಡೆಸುವ ಸಿಬ್ಬಂದಿಗಳು ಪತ್ರಿಕೆಗೆ ತಿಳಿಸಿದ್ದಾರೆ.
ಒಟ್ಟಾರೆ ತಮ್ಮ ಶೌಚಾಲಯದ ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಬಿಡುವ ಮೂಲಕ ಇಡೀ ವಾತಾವರಣ ಗಬ್ಬೇರುವಂತೆ ಮಾಡಿದ ದುರುಳರ ವಿರುದ್ಧ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.