ಗೋಣಿಕೊಪ್ಪಲು, ಅ. ೩೧: ಟಿ.ಶೆಟ್ಟಿಗೇರಿಯಲ್ಲಿ ನಿನ್ನೆ ದಿನ ಹಸು ಮೇಯಿಸಲು ತೆರಳಿದ್ದ ತಾಯಿ-ಮಗ ನೀರು ಪಾಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಇಂದು ನಡೆದ ಕಾರ್ಯಾಚರಣೆಯಲ್ಲಿ ಮೃತಪಟ್ಟ ಮಹಿಳೆ ರೇವತಿ ಅಲಿಯಾಸ್ ರೇಖಾ (೩೨)ಳ ಮೃತದೇಹ ಪತ್ತೆಯಾಗಿದ್ದು ರೇಖಾಳೊಂದಿಗೆ ತೆರಳಿದ್ದ ಮಗ ಕಾರ್ಯಪ್ಪನ ಮೃತದೇಹದ ಶೋಧ ಕಾರ್ಯ ಸಂಜೆಯವರೆಗೂ ಮುಂದು ವರಿಯಿತಾದರೂ ಪತ್ತೆಯಾಗಲಿಲ್ಲ.
ದ. ಕೊಡಗಿನ ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಪ್ರಕಾಶ್ ಎಂಬವರ ಪತ್ನಿ ರೇವತಿ ಹಾಗೂ ಅವರ ಮಗ ಕಾರ್ಯಪ್ಪ (೧೨) ಶನಿವಾರ ಬೆಳಿಗ್ಗೆ ೧೧ರ ವೇಳೆಗೆ ಸಮೀಪದ ಲಕ್ಷö್ಮಣ ತೀರ್ಥ ನದಿ ತೀರದ ದಂಡೆಯಲ್ಲಿ ತಮ್ಮ ಹಸುವನ್ನು ಮೇಯಿಸಲು ತೆರಳಿದ್ದರು.
ಈ ವೇಳೆ ಹಸುವು ಕಟ್ಟಿದ್ದ ಹಗ್ಗವನ್ನು ಬಿಚ್ಚಿಕೊಂಡು ಓಡುತ್ತಿದ್ದುದನ್ನು ಕಂಡು ಕಾರ್ಯಪ್ಪ ಅದರ ಹಿಂದೆಯೇ ಓಡಿ ಹಸುವನ್ನು ಹಿಡಿಯುವ ಪ್ರಯತ್ನ ಮಾಡಿದ್ದ. ಈ ವೇಳೆ ಹೊಳೆಯ ಬದಿಯಲ್ಲಿ ಮರಳು ತೆಗೆದ ದೊಡ್ಡ ಗುಂಡಿಗೆ ಬಿದ್ದ ಕಾರ್ಯಪ್ಪನನ್ನು ರಕ್ಷಣೆ ಮಾಡಲು ತಾಯಿ ರೇಖಾ ಹೊಳೆಗೆ ಇಳಿದಿದ್ದು ಈ ಸಂದರ್ಭ ಇಬ್ಬರೂ ನೀರು ಪಾಲಾಗಿದ್ದರು.
ಕೆಲಸ ನಿಮಿತ್ತ ಮನೆಯಿಂದ ಹೊರಹೋಗಿದ್ದ ರೇಖಾಳ ಪತಿ ಪ್ರಕಾಶ್ ಮಧ್ಯಾಹ್ನ ೧.೩೦ರ ಸುಮಾರಿಗೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ತನ್ನ ಪತ್ನಿ ಹಾಗೂ ಮಗ ಇರಲಿಲ್ಲ. ಈ ಬಗ್ಗೆ ಸಮೀಪದ ಮನೆಯವರನ್ನು ವಿಚಾರಣೆ ಮಾಡಿದ ವೇಳೆ ಹಸುವಿನೊಂದಿಗೆ ಅಮ್ಮ, ಮಗ ಹೊಳೆಯ ಬದಿಯತ್ತ ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.
ಕೂಡಲೇ ಹೊಳೆ ಬದಿಯಲ್ಲಿ ನೋಡಿ ಪರಿಶೀಲನೆ ನಡೆಸಿದಾಗ ಮಗ ಕಾರ್ಯಪ್ಪ ಧರಿಸುತ್ತಿದ್ದ ಚಪ್ಪಲಿ ಹೊಳೆಯ ದಂಡೆಯಲ್ಲಿ ಪತ್ತೆ ಆಗಿತ್ತು.
ನಂತರ ಅನುಮಾನಗೊಂಡ ಪ್ರಕಾಶ್ ಸ್ಥಳೀಯರ ಸಹಕಾರ ಪಡೆದು ಗ್ರಾಮಸ್ಥರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದ್ದರು. ಸಂಜೆಯ ತನಕ ಸ್ಥಳೀಯರು ಹಾಗೂ ಶ್ರೀಮಂಗಲ ಪೊಲೀಸ್ ಠಾಣೆಯ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಬಳಿಕ ಕತ್ತಲಾದ ಕಾರಣ ಹುಡುಕಾಟ ನಿಲ್ಲಿಸಿ ಮನೆಗೆ ತೆರಳಿದ್ದರು.
ಶ್ರೀಮಂಗಲ ಪೊಲೀಸರು ಭಾನುವಾರ ಮುಳುಗು ತಜ್ಞರ ಹಾಗೂ ಅಗ್ನಿಶಾಮಕದಳ ಸಿಬ್ಬಂದಿಗಳ ಸಹಕಾರದಿಂದ ಬೆಳಿಗ್ಗೆ ೬.೩೦ ಗಂಟೆಯಿAದ ಲಕ್ಷö್ಮಣ ತೀರ್ಥ ನದಿಯ ತೀರದಲ್ಲಿ ಶೋಧ ಕಾರ್ಯ ಆರಂಭಿಸಿದರು.
ಸತತ ಹುಡುಕಾಟದ ನಂತರ ೯.೩೦ರ ಸುಮಾರಿಗೆ ರೇಖಾಳ ಮೃತದೇಹ ಪತ್ತೆಯಾಯಿತು. ಆದರೆ ಮಗ ಕಾರ್ಯಪ್ಪನ ಮೃತದೇಹ ಮಾತ್ರ ಪತ್ತೆಯಾಗಿಲ್ಲ.
ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕಾರ್ಯಪ್ಪ ಶಾಲೆಗೆ ರಜೆಯಿದ್ದ ಕಾರಣ ತನ್ನ ಅಮ್ಮನೊಂದಿಗೆ ಹಸುವನ್ನು ಮೇಯಿಸಲು ತೆರಳಿದ್ದ ಎಂದು ಪ್ರಕಾಶ್ ತಿಳಿಸಿದರು.
ಗೋಣಿಕೊಪ್ಪಲುವಿನ ಸರ್ಕಾರಿ ಆಸ್ಪತ್ರೆಯಲ್ಲಿ ರೇಖಾಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಡಿವೈಎಸ್ಪಿ ಜಯಕುಮಾರ್ ಮುಂದಾಳತ್ವದಲ್ಲಿ ಕುಟ್ಟ ಸಿಪಿಐ ಮಂಜಪ್ಪ, ಶ್ರೀಮಂಗಲ ಎಸ್.ಐ. ರವಿಶಂಕರ್, ಎ.ಎಸ್.ಐ. ಅರುಣ್, ಸಿಬ್ಬಂದಿಗಳಾದ ಮಂಜು ಸಾಲಿಯಾನ್, ದನಪತಿ, ವಿಶ್ವನಾಥ್, ಧನ್ಯ ಇನ್ನಿತರರು ಶೋಧ ಕಾರ್ಯಾಚರಣೆಯಲ್ಲಿದ್ದರು. ವೈದ್ಯರ ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಸಂಬAಧಿಕರಿಗೆ ಹಸ್ತಾಂತರಿಸಲಾಯಿತು.
-ಹೆಚ್.ಕೆ. ಜಗದೀಶ್