ಶನಿವಾರಸಂತೆ, ಅ. ೩೦: ಸಂವಿಧಾನದ ರಾಜ್ಯ ನಿರ್ದೇಶನ ತತ್ವ ಕಾಯಿದೆಗಳ ಪ್ರಕಾರ ಪ್ರತಿಯೊಬ್ಬರಿಗೆ ನ್ಯಾಯವನ್ನು ನೀಡುವುದು ಸರಕಾರ ಮತ್ತು ಕಾನೂನು ಸೇವೆಗಳ ಜವಾಬ್ದಾರಿಯಾಗಿದೆ ಎಂದು ಸೋಮವಾರಪೇಟೆ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಕೆ. ಗೋಕುಲ್ ಅಭಿಪ್ರಾಯಪಟ್ಟರು.
ಶನಿವಾರಸಂತೆ ಹೋಬಳಿಯ ಹೊಸಗುತ್ತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೊಡಗು ಜಿಲ್ಲಾಡಳಿತ, ಸೋಮವಾರಪೇಟೆ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ‘ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ’ ಹಾಗೂ ಸೋಮವಾರಪೇಟೆ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದ ಆಶೋತ್ತರಗಳಿಗೆ ಅನುಗುಣವಾಗಿ ಕೇಂದ್ರ ಸರಕಾರ ೧೯೮೭ರಲ್ಲಿ ರಾಷ್ಟಿçÃಯ ಕಾನೂನು ಸೇವೆಗಳ ಕಾಯಿದೆಯನ್ನು ಜಾರಿಗೆ ತಂದಿತು. ಈ ಕಾಯಿದೆಗಳ ಅಡಿಯಲ್ಲಿ ಕಾನೂನು ಸೇವೆಗಳ ಸಮಿತಿ ಮತ್ತು ಕಾನೂನು ಸೇವೆಗಳ ಪ್ರಾಧಿಕಾರಗಳನ್ನು ಸ್ಥಾಪಿಸಲಾಗಿದ್ದು, ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿಸುತ್ತಿದೆ ಎಂದರು.
ವಕೀಲ ಹೆಚ್.ಟಿ. ಹೇಮಚಂದ್ರ ಮಾತನಾಡಿ, ಪ್ರತಿಯೊಬ್ಬರು ಕಾನೂನು ಕಾಯಿದೆಗಳ ಬಗ್ಗೆ ಅರಿವು ಹೊಂದುವ ಅಗತ್ಯವಿದೆ. ಜನರು ಕಾನೂನು - ಕಾಯಿದೆಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಂತೆ ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುತ್ತಿದೆ ಎಂದರು. ಸೋಮವಾರಪೇಟೆ ತಹಶೀಲ್ದಾರ್ ಗೋವಿಂದ್‌ರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಸರಕಾರವು ಹಳ್ಳಿಗಳಲ್ಲಿ ಜನರ ಕುಂದು ಕೊರತೆ, ವಿವಿಧ ಪಿಂಚಣಿ, ಭೂ ದಾಖಲಾತಿ ಮುಂತಾದ ಕಡತ ವಿಲೇವಾರಿ, ಲೋಪದೋಷಗಳನ್ನು ಸ್ಥಳದಲ್ಲಿ ಸರಿಪಡಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಕಾರ್ಯಕ್ರಮ ಜಾರಿಗೆ ತಂದಿದೆ ಎಂದರಲ್ಲದೆ, ಜನರ ಸಮಸ್ಯೆಗೆ ಸ್ಥಳದಲ್ಲೇ ಸ್ಪಂದಿಸುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು, ಹೋಬಳಿ ಮಟ್ಟದ ಕಂದಾಯ ಭೂ ಮಾಪನ, ಸಮಾಜ ಕಲ್ಯಾಣ, ಮಹಿಳಾ ಮಕ್ಕಳ ಕಲ್ಯಾಣ, ಆರೋಗ್ಯ ಇಲಾಖೆಗಳ ಅಧಿಕಾರಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು. ನ್ಯಾಯಾಧೀಶರು ವಿವಿಧ ಪಿಂಚಣಿ ಪತ್ರಗಳನ್ನು ಪಿಂಚಣಿ ಫಲಾನುಭವಿಗಳಿಗೆ ವಿತರಿಸಿದರು. ಸಂಜೆ ೫ ಗಂಟೆವರೆಗೆ ಗ್ರಾಮಸ್ಥರ ಕಡತ ಪರಿಶೀಲನೆ ಮತ್ತು ವಿಲೇವಾರಿ ನಡೆಯಿತು.