ಕಣಿವೆ/ಕೂಡಿಗೆ, ಅ. ೩೦: ಕೂಡುಮಂಗಳೂರು ಗ್ರಾಮ ವ್ಯಾಪ್ತಿಯ ೨೦೨೧-೨೨ನೇ ಸಾಲಿನ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಅಧ್ಯಕ್ಷತೆಯಲ್ಲಿ ಮಾರುಕಟ್ಟೆ ಸಭಾಂಗಣದಲ್ಲಿ ನಡೆಯಿತು.

ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವ ಬಗ್ಗೆ ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಸಭೆಯನ್ನು ಮುಂದೂಡುವAತೆ ಒತ್ತಾಯಿಸಿದರು.

ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಗ್ರಾಮಸ್ಥರಿಗೆ ಸೂಕ್ತ ಮಾಹಿತಿ ಲಭಿಸಬೇಕಾದರೆ ಅಧಿಕಾರಿಗಳ ಉಪಸ್ಥಿತಿ ಅಗತ್ಯ. ಕಚೇರಿ ಸಹಾಯಕರನ್ನು ಸಭೆಗೆ ಕಳುಹಿಸಿ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ವಾಂಚೀರ ಮನು ನಂಜುAಡ ಆರೋಪಿಸಿದರು.

ವೇದಿಕೆಯಲ್ಲಿದ್ದ ಗಾ.್ರಪಂ. ಸದಸ್ಯೆ ಫಿಲೋಮಿನಾ ಅಧ್ಯಕ್ಷರು ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ. ಕೆಲವು ಸದಸ್ಯರನ್ನು ಹೊರತುಪಡಿಸಿ ಇತರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಗ್ರಾಮಸ್ಥರಾದ ನಾಗೇಶ್, ವರದರಾಜದಾಸ್ ರಾಜಣ್ಣ ಕುಮಾರ್ ಮೊದಲಾದವರು ಆಯಾ ವಾರ್ಡ್ಗಳಲ್ಲಿ ನಡೆಯಬೇಕಾಗಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

ವಿಜಯನಗರ, ಬಸವನತ್ತೂರು ಗ್ರಾಮಗಳಲ್ಲಿ, ಹುಲುಗುಂದ ಶಾಲೆ ಬಳಿ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿ ಹಾದು ಹೋಗಿದ್ದು ಅವಘಡ ಸಂಭವಿಸುವ ಮುನ್ನ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ವಿ. ಸಣ್ಣಪ್ಪ, ಮನು ನಂಜುAಡ ಆಗ್ರಹಿಸಿದರು.

ಹಲವೆಡೆ ಹಗಲು ವೇಳೆಯಲ್ಲಿ ಕೂಡ ಬೀದಿ ದೀಪಗಳು ಉರಿಯುತ್ತಿದ್ದು, ವಿದ್ಯುತ್ ಪೋಲಾಗುವುದನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಹಾರಂಗಿ ಜಲಾಶಯ ಕಾಮಗಾರಿಗೆ ಬಂದ ಕೂಲಿ ಕಾರ್ಮಿಕ ಕುಟುಂಬಗಳು ಈಗಲೂ ಅಣೆಕಟ್ಟೆ ಮುಂಭಾಗ ವಾಸಿಸುತ್ತಿದ್ದು ಅವರಿಗೆ ನಿವೇಶನ ಕಲ್ಪಿಸಲು ನೀರಾವರಿ ನಿಗಮದವರು ಯೋಜನೆ ರೂಪಿಸಬೇಕು ಎಂಬ ಒತ್ತಾಯದೊಂದಿಗೆ ಪಿಂಚಣಿ ಸೌಲಭ್ಯಕ್ಕೆ ಕಂದಾಯ ಇಲಾಖೆಗೆ ತೆರಳುವ ಫಲಾನುಭವಿಗಳಿಗೆ ಸಕಾಲದಲ್ಲಿ ಸೇವೆ ಲಭಿಸುತ್ತಿಲ್ಲ ಎಂಬ ಆರೋಪವೂ ಕೇಳಿಬಂತು.

ಚರ್ಚೆ ನಡುವೆ ಗ್ರಾಮದ ಕೆಲವರು ಹಾಗೂ ಪ್ರಸಕ್ತ ಆಡಳಿತ ಮಂಡಳಿ ಉಪಾಧ್ಯಕ್ಷ, ಸದಸ್ಯರ ನಡುವೆ ವಾಗ್ವಾದ ನಡೆಯಿತು. ಈ ಸಂದರ್ಭ ಮಾತನಾಡಿದ ನೋಡಲ್ ಅಧಿಕಾರಿ ತೋಟಗಾರಿಕೆ ಇಲಾಖೆಯ ಅಧಿಕಾರಿ ಕಾವ್ಯ, ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲು ಗ್ರಾಮಸಭೆಯೊಂದೇ ವೇದಿಕೆ. ಆದ್ದರಿಂದ ಗ್ರಾಮಸ್ಥರಿಗೆ ಪ್ರಥಮ ಆದ್ಯತೆ ನೀಡಬೇಕಿದೆ. ಉಳಿದಂತೆ ಗಂಭೀರ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳೊಡನೆ ಚರ್ಚೆ ನಡೆಸಲು ಮತ್ತೊಮ್ಮೆ ಸಭೆ ಕರೆಯುವ ಅವಕಾಶ ಇದೆ ಎಂದರು.

ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಭಾಸ್ಕರ್ ನಾಯಕ್, ಪಿಡಿಒ ಸಂತೋಷ್ ಸೇರಿದಂತೆ ಸರ್ವ ಸದಸ್ಯರುಗಳು ಇದ್ದರು.

ನಾಡ ಕಚೇರಿಯಲ್ಲಿ ದಲ್ಲಾಳಿ ಹಾವಳಿ

ಕುಶಾಲನಗರದ ನಾಡ ಕಚೇರಿಯಲ್ಲಿ ದಲ್ಲಾಳಿ ಹಾವಳಿ ಮಿತಿಮೀರಿದೆ. ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಭವಾಗುತ್ತಿವೆ. ಅಲ್ಲಿನ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಕರ್ತವ್ಯ ಲೋಪದಿಂದಾಗಿ ಸಾರ್ವಜನಿಕರು ಹೆಚ್ಚು ಅಲೆದಾಡುವಂತಾಗಿದೆ ಎಂಬ ದೂರುಗಳು ಸಭೆಯಲ್ಲಿ ಕೇಳಿ ಬಂದವು.

ಪAಚಾಯಿತಿ ಮಾಜಿ ಅಧ್ಯಕ್ಷ ಪುಟ್ಟರಾಜು, ಮಾಜಿ ಸದಸ್ಯ ವರದರಾಜು ದಾಸ್ ಮತ್ತಿತರರು ಕಂದಾಯ ಇಲಾಖೆಯ ವಿರುದ್ಧ ದೂರುಗಳ ಸುರಿಮಳೆಗೈದರು.

ದಲ್ಲಾಳಿಗಳ ಹಾವಳಿ ನಿಯಂತ್ರಿಸುವ ಮೂಲಕ ಗ್ರಾಮ ಲೆಕ್ಕಿಗರು ಹಾಗೂ ಅವರ ಮೇಲಿನ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ೨೫೦ ಎಕರೆ ಕೈಗಾರಿಕ ಪ್ರದೇಶವಿದ್ದು ಅಲ್ಲಿನ ಬಹುತೇಕ ಪರಿಸರ ಕಲುಷಿತಗೊಳ್ಳುತ್ತಿದೆ. ಇದರಿಂದಾಗಿ ನೆರೆ ಕರೆಯ ನಿವಾಸಿಗಳ ಮೇಲೆ ಮಾರಕ ಪರಿಣಾಮವಾಗುತ್ತಿದೆ ಎಂದು ಸಿ.ವಿ. ನಾಗೇಶ್ ದೂರಿದರು.

ಕೂಡುಮಂಗಳೂರು ಗ್ರಾಮದ ಕಾವೇರಿ ಹೊಳೆ ರಸ್ತೆಯ ಬಸವೇಶ್ವರ ದೇಗುಲ ಹಾಗೂ ಅಂಗನವಾಡಿ ಬಳಿ ಇರುವ ವಿದ್ಯುತ್ ಟ್ರಾನ್ಸ್ ಪಾರ್ಮರ್ ಪೆಟ್ಟಿಗೆ ದುರಸ್ತಿಗೀಡಾಗಿ ವರ್ಷಗಳೇ ಕಳೆದರೂ ಕೂಡ ಇದುವರೆಗೂ ಏಕೆ ಬದಲೀ ವ್ಯವಸ್ಥೆ ಮಾಡಲಿಲ್ಲ ಎಂದು ಅಲ್ಲಿನ ನಿವಾಸಿ ಮಂಜುನಾಥ್ ಪ್ರಶ್ನಿಸಿದರು.

ಗ್ರಾಮ ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಪಂಚಾಯಿತಿ ವತಿಯಿಂದ ದೂರು ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರನಾಯಕ್, ಸದಸ್ಯರಾದ ಕೆ.ಕೆ. ಭೋಗಪ್ಪ, ಫಿಲೋಮಿನಾ, ಷಂಶುದ್ದೀನ್, ಈರಯ್ಯ, ಚಂದ್ರು ಮೂಡ್ಲಿಗೌಡ, ಚೈತ್ರಾ, ದಿನೇಶ್, ಪಾರ್ವತಮ್ಮ ಮೊದಲಾದವರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಸ್ವಾಗತಿಸಿದರು.