ಕುಶಾಲನಗರ, ಅ. ೩೦: ೬೬ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ವತಿಯಿಂದ ನಡೆಸುತ್ತಿರುವ 'ಕನ್ನಡಕ್ಕಾಗಿ ನಾವು' ವಿಶೇಷ ಅಭಿಯಾನದ ಅಂಗವಾಗಿ ಕುಶಾಲನಗರ ಬಾಲಕಿಯರ ಮೆಟ್ರಿಕ್ ನಂತರದ ಬಿ.ಸಿ.ಎಂ. ಹಾಸ್ಟೆಲ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗೀತಾ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ.ಪಂ. ಅಧ್ಯಕ್ಷ ಬಿ. ಜೈವರ್ಧನ್ ಮಾತನಾಡಿ, ಪ್ರತಿಯೊಬ್ಬರೂ ನಾಡು-ಸುಡಿ, ಕಲೆ- ಸಂಸ್ಕತಿ ಹಾಗೂ ಭಾಷೆಯ ಬೆಳವಣಿಗೆಗೆ ತೊಡಗಿಸಿ ಕೊಂಡರೆ ಕನ್ನಡ ಭಾಷೆಯ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.

ತಾಲೂಕು ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ನಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು ನಾಡು-ನುಡಿಯ ಸೇವೆ ಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ವಿಶಿಷ್ಟ ಸಂಸ್ಕೃತಿಯನ್ನು ಹೊಂದಿ ರುವ ಕನ್ನಡ ನಾಡಿನ ಅಭಿವೃದ್ಧಿ ಹಾಗೂ ಭಾಷಾ ಬೆಳವಣಿಗೆಗೆ ನಾಡಿನ ಅನೇಕ ದಿಗ್ಗಜರು ಉತ್ತಮ ಸಾಧನೆ ಮತ್ತು ಕೊಡುಗೆ ನೀಡಿರುವುದು ನಾಡಿನ ಹೆಮ್ಮೆಯಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮ ಸಂಯೋಜಕ ಮಣಜೂರು ಮಂಜುನಾಥ್, ಈ ‘ಕನ್ನಡಕ್ಕಾಗಿ ನಾವು' ಅಭಿಯಾನದ ಮೂಲಕ ‘ಮಾತಾಡ್ ಮಾತಾಡ್ ಕನ್ನಡ' ಎಂಬ ಶೀರ್ಷಿಕೆಯಡಿ ನಡೆಯುತ್ತಿರುವ ಕಾರ್ಯಕ್ರಮದ ಉದ್ದೇಶ ಕನ್ನಡದಲ್ಲಿ ಮಾತು ಮತ್ತು ಬರವಣಿಗೆ ಜತೆಗೆ ಈ ಅಭಿಯಾನದ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬೆಳೆಸುವ ದಿಸೆಯಲ್ಲಿ ನಾಟಕ, ನೃತ್ಯ, ಸಂಗೀತ, ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ ನಡೆಸಲಾಗುತ್ತಿದೆ ಎಂದರು.

ಮಡಿಕೇರಿ ಸರಸ್ವತಿ ಶಿಕ್ಷಕರ ತರಬೇತಿ ಕೇಂದ್ರದ ಪ್ರಾಂಶುಪಾಲ ಕುಮಾರ್, ವಿದ್ಯಾರ್ಥಿಗಳು ಕನ್ನಡ ಭಾಷಾಭಿಮಾನ ಬೆಳೆಸಿಕೊಂಡು ಕನ್ನಡತನ ಬೆಳೆಸಿಕೊಳ್ಳಬೇಕು ಎಂದರು.

ತಾಲೂಕು ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ‘ಕನ್ನಡಕ್ಕಾಗಿ ನಾವು’ ವಿಶೇಷ ಅಭಿಯಾ ನವು ನಾಡಿನ ಕಲೆ, ಸಂಸ್ಕೃತಿಯ ವೃದ್ಧಿಗೆ ಸಹಕಾರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ. ಸುರೇಶ್, ಎಲ್ಲರೂ ಕನ್ನಡ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು. ಕಲಾವಿದ ವಿದ್ವಾನ್ ಬಿ.ಸಿ. ಶಂಕರಯ್ಯ ನಾಡಗೀತೆ ಹಾಡಿದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಹೆಚ್.ಜಿ. ಕುಮಾರ್, ಹಾಸ್ಟೆಲ್ ಸಿಬ್ಬಂದಿ ಹೇಮ, ಕಲಾವಿದರಾದ ಅಂಬಿಕಾ ರಾವ್ ಇದ್ದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರಾದ ಪತ್ತಾರ್, ಗೋಪಿ ಮತ್ತು ಶ್ವೇತ ತಂಡದ ವತಿಯಿಂದ ನಡೆಸಿಕೊಟ್ಟ ಗೀತಾ ಗಾಯನ ಪ್ರೇಕ್ಷಕರನ್ನು ರಂಜಿಸಿತು.