ಗೋಣಿಕೊಪ್ಪಲು, ಅ. ೩೦: ಗ್ರಾಮ ಸಭೆಗೆ ವಿವಿಧ ಪ್ರಮುಖ ಇಲಾಖೆಯ ಹಿರಿಯ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಹಾತೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಇಲಾಖೆಯ ಕಿರಿಯ ಅಧಿಕಾರಿಗಳು ಗ್ರಾಮ ಸಭೆಗೆ ಆಗಮಿಸಿ ಗ್ರಾಮಸ್ಥರು ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಹಿಂದೇಟು ಹಾಕುತ್ತಿದ್ದಂತೆಯೇ ಆಕ್ರೊಶಗೊಂಡ ಗ್ರಾಮಸ್ಥರು ಸಭೆಯನ್ನು ಮುಂದೂಡಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪ್ಪಂಡ ಗಿರೀಶ್ ಪೂವಣ್ಣ ಅಧ್ಯಕ್ಷತೆಯಲ್ಲಿ, ನೋಡಲ್ ಅಧಿಕಾರಿ ರಾಜೇಶ್ ಸಮ್ಮುಖದಲ್ಲಿ ಗ್ರಾಮ ಸಭೆ ಆಯೋಜನೆಗೊಂಡಿತ್ತು.

ವಾರದ ಮುಂಚೆಯೇ ದಿನಾಂಕ ನಿಗದಿಪಡಿಸಿ ಅಧಿಕಾರಿಗಳಿಗೆ ಪತ್ರ ಬರೆದು ಗ್ರಾಮ ಸಭೆಗೆ ಆಗಮಿಸುವಂತೆ ಮನವಿ ಮಾಡಿದ್ದರು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳ ಮುಂದೆ ತಮ್ಮ ಅಹವಾಲುಗಳನ್ನು ಸಲ್ಲಿಸಲು ನಿಗದಿತ ಸಮಯದಲ್ಲಿ ಪಂಚಾಯಿತಿ ಸಭಾಂಗಣಕ್ಕೆ ಆಗಮಿಸಿ ಆಸೀನರಾಗಿದ್ದರು. ಇತ್ತ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳ ಆಗಮನಕ್ಕಾಗಿ ಎದುರು ನೋಡುತ್ತಿದ್ದರು.

ಸಭೆಯ ಸಮಯ ಮೀರುತ್ತಿ ದ್ದಂತೆಯೇ ಕೆಲವು ಇಲಾಖೆಯ ಕಿರಿಯ ಅಧಿಕಾರಿಗಳನ್ನು ಹೊರತುಪಡಿಸಿ ಮತ್ಯಾವ ಅಧಿಕಾರಿಗಳೂ ಗ್ರಾಮ ಸಭೆಗೆ ಹಾಜರಾಗಲಿಲ್ಲ. ಇದರಿಂದ ಪಂಚಾಯಿತಿಯ ಅಧ್ಯಕ್ಷರಿಗೆ ಸಹಜವಾಗಿಯೇ ವಿವಿಧ ಇಲಾಖೆಯ ಅಧಿಕಾರಿಗಳ ಮೇಲೆ ಅಸಮಾಧಾನ ಉಂಟಾಯಿತು. ಇನ್ನೊಂದಷ್ಟು ಸಮಯ ಕಾಯೋಣವೆಂದು ಗ್ರಾಮ ಸಭೆಗೆ ಆಗಮಿಸಿದ ಗ್ರಾಮಸ್ಥರು ಆಡಳಿತ ಮಂಡಳಿಗೆ ಸಲಹೆ ನೀಡಿದರು.

ಈ ವೇಳೆ ಕೇವಲ ನೆಪ ಮಾತ್ರಕ್ಕೆ ಎಂಬAತೆ ಚೆಸ್ಕಾಂ ಇಲಾಖೆಯ ಲೈನ್‌ಮ್ಯಾನ್, ಅರಣ್ಯ ಇಲಾಖೆಯ ಅರಣ್ಯ ರಕ್ಷಕ, ಸೇರಿದಂತೆ ಕೆಲವು ಇಲಾಖೆಯ ಕಿರಿಯ ಅಧಿಕಾರಿಗಳು ಸಭೆಗೆ ಆಗಮಿಸಿ ನಿಗದಿತ ಸ್ಥಳದಲ್ಲಿ ಆಸೀನರಾದರು. ಗ್ರಾಮಸಭೆ ಆರಂಭವಾಗುತ್ತಿದ್ದAತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಎದುರು ನೋಡುತ್ತಿದ್ದ ಗ್ರಾಮಸ್ಥರಿಗೆ ತಾಳ್ಮೆಯ ಕಟ್ಟೆ ಒಡೆಯಿತು. ಪಂಚಾಯಿತಿಯು ಉತ್ತಮ ಕೆಲಸ ನಿರ್ವಹಿಸುತ್ತಿದೆ. ಆದರೆ ಆರು ತಿಂಗಳಿಗೊಮ್ಮೆ ನಡೆಯುವ ಗ್ರಾಮ ಸಭೆಗೆ ಪ್ರಮುಖ ಇಲಾಖೆಯ ಅಧಿಕಾರಿಗಳು ಆಗಮಿಸದೇ ಇರುವ ಬಗ್ಗೆ ಸಭೆಯ ಅಧ್ಯಕ್ಷರನ್ನು ಪ್ರಶ್ನಿಸಿದರು.

ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ಪಂಚಾಯಿತಿ ಅಧ್ಯಕ್ಷ ಕುಪ್ಪಂಡ ಗಿರೀಶ್ ಪೂವಣ್ಣ ಸಭೆಗೆ ಆಗಮಿಸಿರುವ ಅಧಿಕಾರಿಗಳು ತಮ್ಮ ಪರಿಚಯವನ್ನು ಗ್ರಾಮಸ್ಥರಿಗೆ ತಿಳಿಸುವಂತೆ ಸೂಚಿಸಿದರು. ಈ ವೇಳೆ ಕೆಲವೇ ಬೆರಳಣಿಕೆಯ ಕಿರಿಯ ಅಧಿಕಾರಿಗಳು ತಮ್ಮ ಪರಿಚಯ ಮಾಡಿಕೊಂಡರು. ಇವರ ಮಾತಿನಿಂದ ಆಕ್ರೋಶಗೊಂಡ ಗ್ರಾಮಸ್ಥರು ಹಿರಿಯ ಅಧಿಕಾರಿಗಳು ಗ್ರಾಮ ಸಭೆಗೆ ಬರುವುದು ವಾಡಿಕೆಯಾಗಿದೆ. ಆದರೆ ತಮ್ಮಿಂದ ನಾವುಗಳು ಏನು ನಿರೀಕ್ಷೆ ಮಾಡಬಹುದು ಎಂದು ಸಭೆಗೆ ಆಗಮಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಕಿರಿಯ ಅಧಿಕಾರಿಗಳು ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಲಾಗದೆ ಮೌನ ವಹಿಸಿದರು.

ನಿಗದಿತ ಸಮಯದಲ್ಲಿ ಅಗತ್ಯ ಮಾಹಿತಿಗಳೊಂದಿಗೆ ಗ್ರಾಮ ಸಭೆಗೆ ಆಗಮಿಸುವಂತೆ ನೋಟೀಸ್ ನೀಡಿದ್ದರು. ಪಂಚಾಯಿತಿ ನೀಡುವ ನೋಟೀಸ್‌ಗೆ ಬೆಲೆ ನೀಡದೆ ಅಧಿಕಾರಿಗಳು ಗೈರಾಗಿರುವ ಬಗ್ಗೆ ಪಂಚಾಯಿತಿ ಅಧ್ಯಕ್ಷ ಗಿರೀಶ್ ಪೂವಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಕೇಳುವ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಉತ್ತರ ನೀಡಲು ಸಾಧ್ಯವಿಲ್ಲದಿದ್ದಲ್ಲಿ ಗ್ರಾಮ ಸಭೆಯನ್ನು ಮುಂದೂಡುವುದಾಗಿ ಗ್ರಾಮಸ್ಥರ ಬಳಿ ಸಲಹೆ ಕೇಳಿದರು. ಈ ವೇಳೆ ಗ್ರಾಮಸ್ಥರು ಮಾತನಾಡಿ ಕೇವಲ ಕಿರಿಯ ಅಧಿಕಾರಿಗಳು ಆಗಮಿಸಿ ಗ್ರಾಮ ಸಭೆಯಲ್ಲಿ ಆಸೀನರಾಗಿರುವುದು ಸರಿಯಲ್ಲ. ಆದ್ದರಿಂದ ಮುಂದಿನಗ್ರಾಮ ಸಭೆಯನ್ನು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲು ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದರು. ಗ್ರಾಮಸ್ಥರ ಸಲಹೆಯಂತೆ ಅಧ್ಯಕ್ಷರು ಸಭೆಯನ್ನು ಮುಂದೂಡಿದರು.

ಪAಚಾಯಿತಿಯ ಹಿರಿಯ ಸದಸ್ಯ ದರ್ಶನ್ ನಂಜಪ್ಪ ಮಾತನಾಡಿ ಕೆಲವು ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಯನ್ನು ಕೇವಲವಾಗಿ ಕಾಣುತ್ತಿದ್ದಾರೆ. ಗ್ರಾಮಸ್ಥರು ತಮ್ಮ ದೈನಂದಿನ ಕೆಲಸವನ್ನು ಬಿಟ್ಟು ಗ್ರಾಮ ಸಭೆಗೆ ಆಗಮಿಸಿ ಇಲಾಖೆಯ ಪ್ರಯೋಜನ ಪಡೆಯಲು ಎದುರು ನೋಡುತ್ತಾರೆ. ಆದರೆ ಅಧಿಕಾರಿಗಳು ಕುಂಟು ನೆಪ ಹೇಳುತ್ತ ಸಭೆಗೆ ಗೈರಾಗುತ್ತಿರುವುದರಿಂದ ಗ್ರಾಮ ಸಭೆಯ ಗೌರವ ಕಡಿಮೆಯಾಗುತ್ತಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷೆ ಸುಮ, ಪಂಚಾಯಿತಿ ಸದಸ್ಯರಾದ ಎಂ.ಎಸ್. ಕುಟ್ಟಪ್ಪ, ಎರವರ ಬೋಜಿ, ಕುಲ್ಲಚಂಡ ಚಿಣ್ಣಪ್ಪ, ಕೊಕ್ಕಂಡ ಗಣಪತಿ, ಜೆ.ಟಿ. ಭೀಮಯ್ಯ, ಗುಮ್ಮಟ್ಟೀರ ದರ್ಶನ್ ನಂಜಪ್ಪ, ಕೆ.ಬಿ. ನಮಿತ, ಪಿ.ಎ. ಮುತ್ತುರಾಜ, ಪಿ.ಎಂ. ರತಿ, ಜಿ. ಸುಮಿತ್ರ, ಮಹೇಶ್, ಜೆ.ಎ. ವಿಷ್ಮ, ಕೆ.ಎಂ. ಶ್ವೇತಾ, ಸಣ್ಣುವಂಡ ಅಕ್ಕಮ್ಮ, ಪಿಡಿಓ ಉಜ್ಮಾಜಬೀನ್, ನೋಡಲ್ ಅಧಿಕಾರಿ ಕೆ.ಆರ್. ರಾಜೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.