ಕೊಡ್ಲಿಪೇಟೆ,ಅ.೩೦: ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸದರಿ ಸಾಲಿನಲ್ಲಿ ರೂ.೮೨.೬೨ ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. ೧೬ ಲಾಭಾಂಶ ನೀಡಲು ನಿರ್ಧರಿಸಲಾಗಿದೆ. ಇದರೊಂದಿಗೆ ಸಂಘ ಸ್ಥಾಪನೆಯಾಗಿ ೧೦೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶತಮಾನೋತ್ಸವದ ಪ್ರಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್.ಡಿ. ತಮ್ಮಯ್ಯ ಹೇಳಿದರು. ಸಂಘದ ವಾರ್ಷಿಕ ಮಹಾಸಭೆ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಅಧ್ಯಕ್ಷ ಎಸ್.ಡಿ. ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಭವಿಷ್ಯದಲ್ಲಿ ಸಂಘವು ಉತ್ತಮ ಪ್ರಗತಿ ಹೊಂದಲು ಸರ್ವ ಸದಸ್ಯರ ಸಹಕಾರ ಅಗತ್ಯ ಎಂದು ಅಧ್ಯಕ್ಷರು ಮನವಿ ಮಾಡಿದರು. ಸಂಘವು ಲಾಭದಲ್ಲಿ ಮುಂದುವರಿಯುತ್ತಿರುವುದರಿAದ ಕನಿಷ್ಟ ಬಡ್ಡಿ ದರದಲ್ಲಿ ಒಂದು ಲಕ್ಷ ರೂಪಾಯಿ ಹೆಚ್ಚುವರಿ ಕೃಷಿ ಸಾಲ ನೀಡುವಂತೆ ಸದಸ್ಯರಾದ ಡಿ.ಭಗವಾನ್ ಮನವಿ ಮಾಡಿದರು. ಶತಮಾನೋತ್ಸವದ ಪ್ರಯುಕ್ತ ನೆನಪಿನಲ್ಲಿ ಉಳಿಯುವಂತಹ ಕಾರ್ಯವನ್ನು ಹಮ್ಮಿಕೊಳ್ಳುವಂತೆ ಸದಸ್ಯರಾದ ಸುಧೀರ್ ಸಲಹೆ ನೀಡಿದರು.

ಸಭೆಯಲ್ಲಿ ಹಾಜರಿದ್ದ ಸದಸ್ಯರು ಕೃಷಿಯೇತರ ಸಾಲವನ್ನು ಹೆಚ್ಚಿಸುವಂತೆ ಬೇಡಿಕೆ ಮುಂದಿಟ್ಟರು. ಸಂಘವು ನ್ಯಾಯಬೆಲೆ ಅಂಗಡಿ ನಿರ್ವಹಣೆ ಮಾಡುತ್ತಿದ್ದು ಸರ್ವರ್ ಇನ್ನಿತರ ಸಮಸ್ಯೆಗಳಿಂದ ಇ.ಕೆವೈಸಿ ಪ್ರಕ್ರಿಯೆ ಸಮರ್ಪಕವಾಗಿ ಆಗದ ಹಲವು ಬಡವರ ಬಿ.ಪಿ.ಎಲ್ ಕಾರ್ಡ್ ರದ್ದಾಗಿದೆ. ಇದನ್ನು ಸರಿಪಡಿಸಲು ಆಹಾರ ಇಲಾಖೆಗೆ ಪತ್ರ ಬರೆದು ಸರಿಪಡಿಸಲು ಆಡಳಿತ ಮಂಡಳಿ ಮುತುವರ್ಜಿ ವಹಿಸುವಂತೆ ಡಿ.ಎನ್. ವಸಂತ್ ಮನವಿ ಮಾಡಿದರು. ಜಿಲ್ಲಾ ಸಹಕಾರ ಬ್ಯಾಂಕ್‌ನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಂಘದಿAದ ಹಣ ನೀಡಿದ್ದು ಸಂಘದ ಶತಮಾನೋತ್ಸವಕ್ಕೆ ಡಿ.ಸಿ.ಸಿ. ಬ್ಯಾಂಕ್‌ನಿAದ ನೆರವು ಕೇಳುವಂತೆ ಸದಸ್ಯರುಗಳು ಒತ್ತಾಯಿಸಿದರು. ಈ ಸಂದರ್ಭ ನೂತನ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಬಿ.ಕೆ.ಚಿಣ್ಣಪ್ಪ, ಒಂದು ಲಕ್ಷ ರೂಪಾಯಿ ಒದಗಿಸುವದಾಗಿ ಭರವಸೆ ನೀಡಿದರು. ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲದ ಮಿತಿಯನ್ನು ಏರಿಸುವಂತೆ ಸದಸ್ಯೆ ನಿರ್ಮಲ ಆಗ್ರಹಿಸಿದರು. ಸದಸ್ಯರುಗಳಾದ ಲೋಕೇಶ್, ಧರ್ಮಣ್ಣ , ದೇವರಾಜ್,ಹೊನ್ನಪ್ಪ, ಸುಲೈಮಾನ್ , ಹರೀಶ್ , ಕೆಂಚೇಶ್ವರ,ಪ್ರಸಾದ್ ಪಟೇಲ್ ಅವರುಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಕೆ.ಬಿ.ಸುಬ್ರಮಣ್ಯ ಆಚಾರ್, ನಿರ್ದೇಶಕರಾದ ಬಿ.ಕೆ.ಚಿಣ್ಣಪ್ಪ, ಬಿ.ಕೆ.ಯತೀಶ್, ಕೆ.ಸಿ.ಪ್ರಸನ್ನ , ವಹಾಬ್ ಕೆ.ಎಂ, ಎ.ಎನ್.ಭಾನುಮತಿ, ಬಿ.ಇ.ರಾಜು, ಜೆ.ಕೆ.ತೇಜುಕುಮಾರ್ , ಬಿ.ಪಿ.ಅಶೋಕ್ , ಕೆ.ವಿ.ಮಲ್ಲೇಶ್, ಬಿ.ಕೆ.ರಂಜಿತಾ, ಕೇಂದ್ರ ಬ್ಯಾಂಕಿನ ಪ್ರತಿನಿಧಿ ನವೀನ್, ಡಿ.ಸಿ.ಸಿ. ಬ್ಯಾಂಕ್ ಕೊಡ್ಲಿಪೇಟೆ ಶಾಖೆ ವ್ಯವಸ್ಥಾಪಕ ವೆಂಕಟೇಶ್ ಉಪಸ್ಥಿತರಿದ್ದರು. ಬ್ಯಾಂಕ್ ಸಿಬ್ಬಂದಿ ನಾಗೇಶ್ ಯು.ಪಿ. ಸ್ವಾಗತಿಸಿದರು. ಯು.ವೈ. ಮಂಜುನಾಥ್ ವಂದಿಸಿದರು. ಸಂಘದ ಸಿಬ್ಬಂದಿವರ್ಗ ಹಾಗೂ ಸದಸ್ಯರುಗಳು ಸಭೆಯಲ್ಲಿ ಹಾಜರಿದ್ದರು. ೨೦೨೦/೨೧ ಸಾಲಿನ ಲೆಕ್ಕ ಪರಿಶೋಧನ ವರದಿಯನ್ನು ಮಂಡಿಸಿ, ಚರ್ಚಿಸಿ ಅನುಮೋದನೆ ಪಡೆಯಲಾಯಿತು.