ದೆಹಲಿ ಗಡಿಯಲ್ಲಿನ ಪ್ರತಿಭಟನಾ ಸ್ಥಳದಲ್ಲಿ ಬ್ಯಾರಿಕೇಡ್‌ಗಳ ತೆರವು

ನವದೆಹಲಿ, ಅ. ೨೯: ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರದಲ್ಲಿ ರೈತ ವಿರೋಧಿ ಕಾನೂನು ಪ್ರತಿಭಟನಾ ಸ್ಥಳದಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳು ಮತ್ತು ಕನ್ಸರ್ಟಿನಾ ವೈರ್‌ಗಳನ್ನು ದೆಹಲಿ ಪೊಲೀಸರು ಇಂದು ತೆಗೆದುಹಾಕಲು ಮುಂದಾಗಿದ್ದಾರೆ. ಕಳೆದ ವರ್ಷ ಕಬ್ಬಿಣ ಮತ್ತು ಸಿಮೆಂಟ್ ಬಳಕೆ ಮಾಡಿ ಬ್ಯಾರಿಕೇಡ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಕನಿಷ್ಟ ಐದು ಪದರಗಳ ಕನ್ಸರ್ಟಿನಾ ತಂತಿಗಳನ್ನು ಹಾಕಲಾಗಿತ್ತು. ರಸ್ತೆಗಳನ್ನು ಮುಕ್ತಗೊಳಿಸುವಂತೆ ಅಕ್ಟೋಬರ್ ೨೧ ರ ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಬ್ಯಾರಿಕೇಡ್ ಗಳನ್ನು ತೆಗೆದುಹಾಕಲಾಗುತ್ತಿದೆ. ಕಳೆದ ವರ್ಷ ಜಾರಿಗೆ ತಂದ ಮೂರು ಕಾನೂನುಗಳು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಪ್ರತಿಭಟನಾನಿರತ ರೈತರು ಹೋರಾಡುತ್ತಲೇ ಬರುತ್ತಿದ್ದಾರೆ. ಇದರ ನಡುವೆ ಕೇಂದ್ರವು ಈ ಕಾನೂನುಗಳು ರೈತ ಪರ ಎಂದು ಹೇಳುತ್ತಿದೆ.

ಡೆಲ್ಟಾ ರೂಪಾಂತರಿ ವೈರಸ್ ಆತಂಕ

ಬೆAಗಳೂರು, ಅ. ೨೯: ರಾಜ್ಯದಲ್ಲಿ ಡೆಲ್ಟಾ ರೂಪಾಂತರಿ ವೈರಸ್ ಆತಂಕ ಶುರುವಾಗಿರುವ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ಅಭಿಯಾನ ಚುರುಕುಗೊಳಿಸುವಂತೆ ತಜ್ಞರು ಹಾಗೂ ತಾಂತ್ರಿಕ ಸಲಹಾ ಸಮಿತಿಯ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಸರ್ಕಾರದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ತಜ್ಞರು ರೂಪಾಂತರಿ ವೈರಸ್ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ. ರಷ್ಯಾದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿರುವ ಕೋವಿಡ್‌ನ ಹೊಸ ಎವೈ೪.೨ ತಳಿ ವೈರಸ್ ರಾಜ್ಯದಲ್ಲಿ ಪತ್ತೆಯಾಗಿದೆಯಾದರೂ ಸೋಂಕು ಹರಡಿಲ್ಲ ಹಾಗೂ ಅದರ ಪರಿಣಾಮ ಹೇಗಿರುತ್ತದೆ ಎಂಬುದು ದೃಢಪಟ್ಟಿಲ್ಲ. ಹಾಗಾಗಿ ಈ ತಳಿ ಮೇಲೆ ತಜ್ಞರ ಸಮಿತಿಗಳು ನಿಗಾವಹಿಸುವಂತೆ ಕೇಂದ್ರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಹೊಸ ತಳಿ ಪತ್ತೆಗೆ ಪರೀಕ್ಷೆಗಳನ್ನು ಹೆಚ್ಚಿಸಲು ಚರ್ಚೆ ನಡೆದಿವೆ ಎಂದು ತಿಳಿದುಬಂದಿದೆ.