ಎಚ್.ಟಿ. ಅನಿಲ್

ಮಡಿಕೇರಿ, ಅ. ೨೯: ಅದು ಭಕ್ತಪ್ರಹ್ಲಾದ ಚಿತ್ರದ ದೃಶ್ಯ.. ಡಾ.ರಾಜ್ ಕುಮಾರ್ ಹಿರಣ್ಯಕಶ್ಯಿಪು ಆಗಿ ಕಂಬಕAಬಗಳನ್ನು ಗಧೆಯಿಂದ ಮುಟ್ಟಿ ಪ್ರಹ್ಲಾದನನ್ನು ಕೇಳುತ್ತಾರೆ.

ಎಲ್ಲಿದ್ದಾನೆ ನಿನ್ನ ಹರಿ.. ಇಲ್ಲಿದ್ದಾನೆಯೇ.. ಇಲ್ಲಿದ್ದಾನೆಯೇ... ಹೇಳು ಎಲ್ಲಿದ್ದಾನೆ.. ನಿನ್ನ ಹರಿ..?

ಪ್ರಹ್ಲಾದ ತೊದಲು ನುಡಿಯಿಂದ ಹೇಳುತ್ತಾನೆ. ಎಲ್ಲೆಲ್ಲೂ ಇದ್ದಾನೆ. ನನ್ನ ಹರಿ.. ಎಲ್ಲೆಲ್ಲೂ ಇದ್ದಾನೆ.. ಅಲ್ಲಿಯೂ ಇದ್ದಾನೆ.. ಇಲ್ಲಿಯೂ ಇದ್ದಾನೆ..ನನ್ನ ಹರಿ..

ಪ್ರೇಕ್ಷಕರು ಭಾವಪೂರ್ಣವಾಗಿ ಪ್ರಹ್ಲಾದನ ನಟನೆ ನೋಡಿ ಬಪ್ಪರೇ ಮಗನೇ ಎಂದು ಚಪ್ಪಾಳೆ ಹೊಡೆದದ್ದು ಬೇರೆ ಯಾರಿಗೂ ಅಲ್ಲ. ಡಾ.ರಾಜ್ ಕುಮಾರ್ ಅವರ ಕೊನೇ ಮಗನಾಗಿದ್ದ ಪುನೀತನಿಗೆ. ಅಂಥ ಅದ್ಭುತ ಅಭಿನಯ ಅಪ್ಪ ಮಗನದ್ದಾಗಿತ್ತು.

ಈಗ ಸಮಯ ಬಂದಿದೆ. ಎಲ್ಲಿದ್ದಾನೆ ಅಪ್ಪು.. ಎಲ್ಲಿದ್ದಾನೆ ನಮ್ಮ ಪುನೀತ್ ಎಂದರೆ.. ಎಲ್ಲೆಲ್ಲಿಯೂ ಇದ್ದಾನೆ. ನಮ್ಮ ಅಪ್ಪು ಎಲ್ಲೆಲ್ಲಿಯೂ ಚಿರಸ್ಥಾಯಿಯಾಗಿದ್ದಾನೆ. ೫೨ ಚಿತ್ರಗಳಲ್ಲಿ ಜೀವಂತವಾಗಿದ್ದಾನೆ ಎಂದು ಹೇಳುವ ದಿನ ಬಂದಿದೆ.

ಕೊಡಗಿಗೂ ಸಿನಿಮಾಕ್ಕೂ ಅಂಥ ಬಲವಾದ ನಂಟೇನಿಲ್ಲ. ಕೊಡಗಿನಲ್ಲಿ ಚಿತ್ರಮಂದಿರಗಳ ಸಂಖ್ಯೆಯೇ ಕಡಿಮೆ ಇರುವುದರಿಂದಾಗಿ ಚಿತ್ರವೀಕ್ಷಕರ ಸಂಖ್ಯೆಯೂ ಕಡಿಮೆ. ಆದರೆ, ಪುನೀತ್‌ರಾಜ್‌ಕುಮಾರ್ ನಿಧನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದಾಗ ಕೊಡಗಿನೆಲ್ಲೆಡೆ ಆಘಾತ, ಬೇಸರ, ದುಃಖ ಮಡುಗಟ್ಟಿತ್ತು. ಅಯ್ಯೋ ಪುನೀತಾ... ಹೋಗಿಬಿಟ್ಟನಾ.. ಒಳ್ಳೆ ನಟ.. ಒಳ್ಳೇ ವ್ಯಕ್ತಿ.. ಛೇ ಎಂದು ಮರುಗಿದವರ ಸಂಖ್ಯೆ ದೊಡ್ಡದಿತ್ತು.

ಪುನೀತ್ ಓರ್ವ ಸಿನಿಮಾ ನಟನಾಗಿ ಮಾತ್ರ ಖ್ಯಾತವಾಗಿರಲಿಲ್ಲ. ಪುನೀತ್ ಕನ್ನಡನಾಡಿನ ಜನತೆಯ ಕೌಟುಂಬಿಕ ನಟನಂತೆ ಇದ್ದ. ಡಾ. ರಾಜ್‌ಕುಮಾರ್ ಇಹಲೋಕ ತ್ಯಜಿಸಿದ ನಂತರ ಕನ್ನಡಿಗರ ಕುಟುಂಬಗಳ ಮನಮೆಚ್ಚಿದ ನಟನಾಗಿ ಮೆರೆದವನೇ ಈ ಅಪ್ಪು.

ಅಪ್ಪನಿಗೆ ತಕ್ಕ ಮಗ.. ಈ ಪುನೀತ್. ಪುನೀತ್ ರೂಪದಲ್ಲಿ ಕನ್ನಡಿಗರು ಡಾ.ರಾಜ್ ಕುಮಾರ್ ಅವರನ್ನು ಕಾಣುತ್ತಿದ್ದರು. ರಾಜ್ ಮರೆಯಾಗಿರಬಹುದು. ಪುನೀತ್ ರಾಜಣ್ಣನ ಪರವಾಗಿ ಕನ್ನಡನಾಡಿನಲ್ಲಿ ಇದ್ದಾನಲ್ಲ ಎಂಬ ಕನ್ನಡಿಗರ ತೃಪ್ತಿ, ಹೆಮ್ಮೆ ಶುಕ್ರವಾರ ಮುದುಡಿ ಹೋಯಿತು.

ಡಾ.ರಾಜ್‌ಕುಮಾರ್ ವಂಶದ ಕುಡಿಯಾಗಿ

(ಮೊದಲ ಪುಟದಿಂದ) ತಂದೆಯ ನಟನಾ ಪ್ರತಿಭೆಯನ್ನು ತನ್ನಲ್ಲಿ ಹೊಂದಿದ್ದ. ಅಷ್ಟೇ ಅಲ್ಲ. ರಾಜ್ ಕುಮಾರ್ ಅವರಂತೆ ಹಲವಾರು ವಿಚಾರ ಗಳಲ್ಲಿಯೂ ಅಪ್ಪು ಮಾದರಿಯಾಗಿದ್ದ. ರಾಜ್‌ಕುಮಾರ್ ಅವರನ್ನೇ ಹೋಲುವ ಸಂಭಾಷಣೆ ಹೇಳುವ ಕಲೆ, ನಟನೆ, ಸರಳ ಜೀವನದಲ್ಲಿಯೂ ಪರೋಪಕಾರಿಯಾಗಿ ಅನೇಕರಿಗೆ ನೆರವಾದ ಹೃದಯವಂತ.

ಪುನೀತ್ ಬಾಳಿದ್ದ ೪೬ ವರ್ಷಗಳೂ ಮಾನವೀಯತೆಯೊಂದಿಗೆ ಮಾದರಿಯಾಗಿಯೇ ಜೀವಿಸಿದ್ದ ಎಂಬುದು ಆತನ ಹೆಗ್ಗಳಿಕೆ. ಅಪ್ಪನಿಗೆ ತಕ್ಕ ಮಗ ಎಂಬ ಪದಕ್ಕೆ ಪುನೀತ್ ಸರಿಸಾಟಿ. ಉಸಿರು ಚೆಲ್ಲಿದ ಮೇಲೂ ಅಪ್ಪನಂತೆ ತನ್ನ ನೇತ್ರಗಳನ್ನು ದಾನ ಮಾಡಿ ನುಡಿದಂತೆ ನಡೆದ ಹೆಮ್ಮೆಯ ರಾಜ - ಕುವರ ಈತ.

ಪ್ರೇಮದ ಕಾಣಿಕೆ ಬಾಲನಟನಾಗಿ ಪುನೀತ್ ಅಭಿನಯದ ಮೊದಲ ಚಿತ್ರ - ೧೯೮೫ ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ತನ್ನ ಪ್ರಿಯ ಶಿಕ್ಷಕಿ ಮಾರ್ಸಿಯಾ ಬಯಸಿದ ಬೆಟ್ಟದ ಹೂವನ್ನು ತಂದುಕೊಡುವ ಬಾಲಕ ರಾಮುವಿನ ಪಾತ್ರದಲ್ಲಿ ಅಪ್ಪು ಬಿಟ್ಟರೆ ಬೇರೆ ಯಾರನ್ನೂ ಊಹಿಸಿಕೊಳ್ಳಲು ಅಸಾಧ್ಯ. ತರುವಾಯ ಬಾಲನಟನಾಗಿ ರಾಜ್‌ಕುಮಾರ್ ಅವರ ಅನೇಕ ಚಿತ್ರಗಳಲ್ಲಿಯೂ ಪುನೀತ್ ನಟಿಸಿದ್ದ. ವಸಂತ ಗೀತ (೧೯೮೦), ಭಾಗ್ಯವಂತ (೧೯೮೧), ಚಲಿಸುವ ಮೋಡಗಳು (೧೯೮೨), ಎರಡು ನಕ್ಷತ್ರಗಳು (೧೯೮೩) ಮತ್ತು ಬೆಟ್ಟದ ಹೂವು (೧೯೮೫) ಸದಾ ಸ್ಮರಣೀಯವಾದದ್ದು. ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ಅಪ್ಪ್ಪು ರಾಷ್ಟç ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದರು.

ನಂತರ ಕನ್ನಡಕ್ಕೆ ಪುನೀತ್ ನಾಯಕನಾಗಿ ಕಾಲಿರಿಸಿದ್ದು ಅಪ್ಪು ಹೆಸರಿನ ಚಿತ್ರದ ಮೂಲಕ. ಮೊದಲ ಚಿತ್ರವೇ ಅತ್ಯಂತ ಯಶಸ್ವಿಯಾಯಿತು. ತರುವಾಯ ಒಂದರ ಹಿಂದೊAದರAತೆ ಪುನೀತ್ ನಟನೆಯ ಸಿನಿಮಾಗಳು ಕನ್ನಡ ಸಿನಿ ಪ್ರೇಮಿಗಳ ಮನಸೂರೆಗೊಂಡವು. ಅಪ್ಪು ಅಥವಾ ಪುನೀತ್ ಸಧಬಿರುಚಿಯ ಚಿತ್ರಗಳಿಗೆ ಮಾದರಿಯಾದರು.

ಕತ್ತಿ, ಲಾಂಗ್, ಮಚ್ಚು, ರಕ್ತಪಾತಗಳಿಲ್ಲದ.. ಅಶ್ಲೀಲ ಸಂಭಾಷಣೆಗಳಿಲ್ಲದ.. ಹಿರಿಯರಿಂದ ಕಿರಿಯವರೆಗೂ ಒಟ್ಟಾಗಿ ಕುಳಿತು ನೋಡುವ ಸಿನಿಮಾ ಎಂದರೆ ಪುನೀತ್ ಅವರದ್ದು ಎಂಬ ಖಚಿತ ಅಭಿಪ್ರಾಯಕ್ಕೆ ಕನ್ನಡಿಗರು ಬಂದಿದ್ದರು. ಅಪ್ಪು ಹಲವರ ಪಾಲಿಗೆ ತಮ್ಮದೇ ಕುಟುಂಬದ ಸದಸ್ಯನಂತಾಗಿದ್ದ. ಅತ್ಯಧಿಕ ಅಭಿಮಾನಿಗಳನ್ನು ಹೊಂದಿದ್ದ ಪುನೀತ್ ತನ್ನ ಅಭಿಮಾನಿಗಳ ಪಾಲಿಗೆ ಪವರ್ ಸ್ಟಾರ್ ಆಗಿದ್ದರು. ಅದರಲ್ಲಿಯೂ ಯುವಪೀಳಿಗೆಯ ಪಾಲಿಗೆ ಪುನೀತ್ ಐಕಾನ್ ಹೀರೋ.

ಸಿನಿಮಾ ನೋಡದವರ ಪಾಲಿಗೆ ಕೂಡ ಪುನೀತ್ ಮೆಚ್ಚಿನ ನಟನಾಗಿದ್ದ. ಇದಕ್ಕೆ ಕಾರಣವಾದದ್ದು ಕಿರುತೆರೆಯ ಕಾರ್ಯಕ್ರಮಗಳು.

ಕನ್ನಡದ ಕೋಟ್ಯಾಧಿಪತಿಯನ್ನು ಪುನೀತ್ ನಿರೂಪಣೆ ಮಾಡುತ್ತಿದ್ದ ರೀತಿಗೆ ಅವರೇ ಸರಿಸಾಟಿ. ಮುಗುಳು ನಗು, ಎದುರಿಗಿರುವ ಸ್ಪರ್ಧಿಗಳನ್ನು ಪ್ರೋತ್ಸಾಹಿಸುತ್ತಿದ್ದ ರೀತಿ, ಹಮ್ಮುಬಿಮ್ಮಿಲ್ಲದೆ ತಾನೋರ್ವ ಸ್ಟಾರ್ ನಟ ಎಂಬ ಗರ್ವ ಇಲ್ಲದೇ ನಡೆದುಕೊಳ್ಳುತ್ತಿದ್ದ ಪುನೀತ್ ನಿಜಕ್ಕೂ ಕೋಟ್ಯಾಧಿಪತಿ ಮೂಲಕ ಕೋಟಿ ಕೋಟಿ ವೀಕ್ಷಕರನ್ನು ಕಿರುತೆರೆಯಲ್ಲಿಯೂ ಸಂಪಾದಿಸಿಕೊAಡರು. ಅಂತೆಯೇ ಫ್ಯಾಮಿಲಿ ಪವರ್ ಎಂಬ ಮತ್ತೊಂದು ರಿಯಾಲಿಟಿ ಶೋ ಮೂಲಕವೂ ಪುನೀತ್ ಟಿವಿ ವೀಕ್ಷಕರ ಮನಗೆದ್ದಿದ್ದರು.

ಸರ್ಕಾರದ ವಿವಿಧ ಯೋಜನೆಗಳ (ಮತದಾನ ಮಾಡಿ ಜಾಗೃತಿ, ನಂದಿನಿ ಹಾಲಿನ ಉತ್ಪನ್ನಗಳು) ಜಾಹೀರಾತಿಗೂ ಪುನೀತ್ ರೂಪದರ್ಶಿಯಾಗಿದ್ದರು. ಅಪ್ಪು ಅಭಿನಯದ ಜಾಹೀರಾತು ಟಿವಿಯಲ್ಲಿ ಪ್ರಸಾರವಾಗುವಾಗ ಮಕ್ಕಳು, ಹಿರಿಯರೂ ಕೂಡ ಆ ಜಾಹೀರಾತನ್ನು ಮತ್ತೆ ಮತ್ತೆ ನೋಡಿ ಮೆಚ್ಚುತ್ತಿದ್ದರು ಎಂಬುದೇ ಪುನೀತ್ ಗಳಿಸಿದ್ದ ಖ್ಯಾತಿಗೆ ನಿದರ್ಶನ.

ಪುನೀತ್ ಮೊದಲ ಪ್ರಮುಖ ಪಾತ್ರದಲ್ಲಿ ಅಪ್ಪು (೨೦೦೨), ಅಭಿ (೨೦೦೩), ಆಕಾಶ್ (೨೦೦೫), ಅರಸು (೨೦೦೭), ಮಿಲನ (೨೦೦೭), ಜಾಕೀ (೨೦೧೦), ಹುಡುಗರು (೨೦೧೧), ಅಣ್ಣಾ ಬಾಂಡ್ (೨೦೧೨) ಮತ್ತು ಪವರ್ (೨೦೧೪) ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವೈಯಕ್ತಿಕ ಜೀವನ

ಪುನೀತ್, ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಮಗನಾಗಿ ೧೭ ನೇ ಮಾರ್ಚ್ ೧೯೭೫ರಂದು ಜನಿಸಿದರು. ಇವರು ರಾಜಕುಮಾರ್ ದಂಪತಿಯ ಕಿರಿಯ ಮಗ. ನಟರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್.

ಹಿರಿಯ ಸಹೋದರರು. ಪುನೀತ್ ೬ ವರ್ಷದವನಿದ್ದಾಗ, ಅವರ ಕುಟುಂಬ ಚೆನ್ನೆöÊನಿಂದ ಬೆಂಗಳೂರಿಗೆ ಬಂತು. ೧೦ ವರ್ಷದವರೆಗೆ ರಾಜ್‌ಕುಮಾರ್ ತನ್ನ ಮಗ ಅಪ್ಪು ಮತ್ತು ಮಗಳು ಪೂರ್ಣಿಮಾರನ್ನು ಚಲನಚಿತ್ರದ ಸೆಟ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಬಾಲ್ಯದಲ್ಲಿಯೇ ಅಪ್ಪುವಿಗೆ ಸಿನಿಮಾ ಆಕರ್ಷಣೆ ಉಂಟಾಯಿತು.

ಪುನೀತ್ ಡಿಸೆಂಬರ್ ೧, ೧೯೯೯ ರಂದು ಅಶ್ವಿನಿ ರೇವಂತ್‌ರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ದ್ರಿತಿ ಮತ್ತು ವಂದಿತಾ. ಇವರ ಮೊದಲ ಹೆಸರು ಮಾಸ್ಟರ್ ಲೋಹಿತ್ ಆಗಿತ್ತು.

ವೀರ ಕನ್ನಡಿಗ, ಮೌರ್ಯ, ಆಕಾಶ್, ಅಜಯ್, ಮಿಲನ, ವಂಶಿ, ಪೃಥ್ವಿ, ರಾಮ್, ಜಾಕಿ, ಹುಡುಗರು, ಪರಮಾತ್ಮ, ಅಣ್ಣಬಾಂಡ್, ಯಾರೇ ಕೂಗಾಡಲಿ ನಿನ್ನಿಂದಲೇ, ಮೈತ್ರಿ , ರಣವಿಕ್ರಮ ಚಕ್ರವ್ಯೂಹ, ದೊಡ್ಮನೆ ಹುಡುಗ, ರಾಜಕುಮಾರ, ನಟಸಾರ್ವಭೌಮ, ಯುವರತ್ನ ಚಿತ್ರಗಳು ಪುನೀತ್‌ಗೆ ಅತ್ಯಂತ ಖ್ಯಾತಿ ತಂದುಕೊಟ್ಟ ಚಿತ್ರಗಳಲ್ಲಿ ಕೆಲವು.

ಪುನೀತ್ ತಮ್ಮದೇ ಚಿತ್ರ ನಿರ್ಮಾಣ ಸಂಸ್ಥೆಯನ್ನೂ ಹೊಂದಿದ್ದರು. ಅವರೋರ್ವ ಗಾಯಕರೂ ಆಗಿದ್ದರು. ಕೆಲವು ಯಶಸ್ವಿ ಚಿತ್ರಗಳನ್ನೂ ನಿರ್ಮಿಸಿದ್ದರು. ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ಪುನೀತ್ ಯಶಸ್ವಿಯಾಗಿ ತೊಡಗಿಸಿಕೊಂಡಿದ್ದರು. ೨೦೨೧ ರಲ್ಲಿ ತೆರೆಕಂಡ ಯುವರತ್ನವೇ ಪುನೀತ್ ಕೊನೇ ಚಿತ್ರವಾಗಿದೆ.

ಪುನೀತ್ ರಾಜಕುಮಾರ್ ತೆರೆಕಾಣಲು ಸಿದ್ದವಾಗಿದ್ದ ಜೇಮ್ಸ್ ಸಿನಿಮಾದ ಕೆಲಸಗಳತ್ತ ಗಮನ ಹರಿಸುತ್ತಿದ್ದರು. ಅಲ್ಲದೇ, ಪವನ್‌ಕುಮಾರ್ ನಿರ್ದೇಶನದ ‘ದ್ವಿತ್ವ’ ಚಿತ್ರದಲ್ಲೂ ಅಪ್ಪು ನಟಿಸುತ್ತಿದ್ದರು. ಎರಡು ಚಿತ್ರಗಳು ತೆರೆಕಾಣುವ ಮುನ್ನವೇ ಪುನೀತ್ ತೆರೆಮರೆಗೆ ಸರಿದುಹೋಗಿದ್ದಾರೆ.

ಇನ್ನಷ್ಟು ವರ್ಷ ಜೀವಿಸಿದ್ದರೆ ಮತ್ತಷ್ಟು ಚಂದದ, ಯೋಗ್ಯ ಚಿತ್ರಗಳನ್ನು ಪುನೀತ್ ನೀಡುತ್ತಿದ್ದರು. ಕನ್ನಡಿಗರು ಮನತುಂಬಿ ಇಂಥ ಕೌಟುಂಬಿಕ ಮನರಂಜನೆಯ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಇರುತ್ತಿತ್ತು. ಆದರೆ ಕನ್ನಡದ ಭಾಗ್ಯವಂತ, ಕನ್ನಡದ ಧ್ರುವತಾರೆ ಇದಕ್ಕೆಲ್ಲಾ ಅವಕಾಶ ನೀಡದೆ ಮರಳಿ ಬಾರದ ಲೋಕಕ್ಕೆ ತೆರಳಿಬಿಟ್ಟಿದ್ದಾರೆ. ಬೆಟ್ಟದ ಹೂವು ೩೫ ವರ್ಷಗಳು ಸೊಗಸಾಗಿ ಅರಳಿ ಕೊನೆಗೂ ಅನಿರೀಕ್ಷಿತವಾಗಿ ಬಾಡಿಹೋಗಿದೆ.

ಚಲಿಸುವ ಮೋಡಗಳು ಚಿತ್ರದಲ್ಲಿ ಡಾ.ರಾಜ್ ಕುಮಾರ್ - ಅಂಬಿಕಾ ಜತೆಯಾಗಿ ಪುನೀತ್ ಹಾಡುವ ಹಾಡಿದೆ. ಕಾಣದಂತೆ ಮಾಯವಾದನೋ.. ಶಿವ ಕಾಣದಂತೆ ಮಾಯವಾದನೋ.. ಕಾಣದಂತೆ.. ಶಿವ ಕಾಣದಂತೆ ಕೈಯ ಕೊಟ್ಟು ಓಡಿ ಹೋದನೋ.

ಹೌದು.. ಪ್ರೀತಿಯ ಅಪ್ಪು ಕೂಡ ಯಾರಿಗೂ ಗೊತ್ತಾಗದಂತೆ.. ಅಭಿಮಾನಿ ದೇವರಿಗೂ ತಿಳಿಯದಂತೆ ಶಿವನ ಸಾನಿಧ್ಯಕ್ಕೆ ತೆರಳಿಬಿಟ್ಟಿದ್ದಾರೆ. ಬಾಳ ದಾರಿಯಲ್ಲಿ ಪುನೀತ್ ಎಂಬ ತೇಜಸ್ಸಿನ ಸೂರ್ಯ ಜಾರಿಹೋಗಿದೆ...

ಇನ್ನು ಎಲ್ಲಿದ್ದಾನೆ.. ಪ್ರೀತಿಯ ಅಪ್ಪು... ಇಲ್ಲಿಯೇ ಇದ್ದಾನೆ.. ಎಲ್ಲೆಲ್ಲಿಯೂ ಇದ್ದಾನೆ.. ಅನೇಕ ಸಿನಿಮಾಗಳ ಮೂಲಕ ಚಿರಾಯುವಾಗಿದ್ದಾನೆ...

ಪುನೀತ್‌ಗೆ ಎದೆನೋವು

ಗುರುವಾರ ರಾತ್ರಿ ಹೆಸರಾಂತ ಗಾಯಕ ಗುರುಕಿರಣ್ ಹುಟ್ಟು ಹಬ್ಬದ ಪಾರ್ಟಿಗೆ ನಟ ರಮೇಶ್ ಅರವಿಂದ್ ಜತೆ ತೆರಳಿದ್ದ ಸಂದರ್ಭ ಮೊದಲ ಬಾರಿಗೆ ಪುನೀತ್ ಗೆ ಎದೆನೋವು ಕಾಣಿಸಿಕೊಂಡಿತ್ತು. ಮಧ್ಯರಾತ್ರಿಯವರೆಗೂ ಪಾರ್ಟಿಯಲ್ಲಿ ಪುನೀತ್ ನಗುನಗುತ್ತಲೇ ಇದ್ದರು. ತನ್ನ ನಾಯಕತ್ವದ ಮೊದಲ ಚಿತ್ರವಾಗಿದ್ದ ಅಪ್ಪು ಚಿತ್ರದ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಜತೆ ಕಾಣಿಸಿಕೊಂಡದ್ದೇ ಪುನೀತ್ ಅವರ ಕೊನೇ ಕಾರ್ಯಕ್ರಮ ಎಂಬುದು ವಿಪರ್ಯಾಸ.

ಶುಕ್ರವಾರ ಬೆಳಗ್ಗೆ ೧೦ ಗಂಟೆ ವೇಳೆಗೆ ಮನೆ ಪಕ್ಕದ ಪಾರ್ಕ್ನಲ್ಲಿ ಜಾಗಿಂಗ್ ಮಾಡುತ್ತಿದ್ದ ಸಂದರ್ಭವೇ ಪುನೀತ್‌ಗೆ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಹೋಗೋದಿಲ್ಲ ನಾನು ಫಿಟ್ ಇದ್ದೇನೆ ಎಂದಿದ್ದAತೆ ಪವರ್‌ಸ್ಟಾರ್. ಮನೆಯೊಳಗೆ ತೆರಳಿದ ಸಂದರ್ಭ ತೀವ್ರ ಎದೆನೋವಾಗಿ ಎದೆಯನ್ನು ಹಿಡಿದುಕೊಂಡ ಪುನೀತ್ ಅವರನ್ನು ಕೂಡಲೇ ಪಕ್ಕದಲ್ಲಿಯೇ ಇದ್ದ ರಮಣ ಶ್ರೀಕ್ಲಿನಿಕ್‌ಗೆ ಕರೆದೊಯ್ಯಲಾಯಿತು. ಪುನೀತ್‌ಗೆ ಹೃದಯಾಘಾತವಾಗಿದೆ ಎಂದು ತಿಳಿಸಿದ ಆಸ್ಪತ್ರೆಯ ವೈದ್ಯರು ಕೂಡಲೇ ಹೆಚ್ಚಿನ ಚಿಕಿತ್ಸೆ ನೀಡುವಂತೆ ತಿಳಿಸಿದರು. ಅಂತೆಯೇ ವಿಕ್ರಂ ಆಸ್ಪತ್ರೆಗೆ ಪುನೀತ್ ಅವರನ್ನು ೧೧.೪೦ ಗಂಟೆಗೆ ಕರೆದೊಯ್ಯುವಷ್ಟರಲ್ಲಿಯೇ ಅವರು ಕೊನೆಯುಸಿರೆಳೆದಿದ್ದರು. ಮಧ್ಯಾಹ್ನ ೨ ಗಂಟೆ ವೇಳೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನೀತ್ ಮರಣ ವಿಷಯವನ್ನು ಅಧಿಕೃತವಾಗಿ ಘೋಷಿಸಿದರು. ಸಂಜೆ ವೇಳೆಗೆ ಸಹಸ್ರಾರು ಜನರ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂಗೆ ತರಲಾಯಿತು. ಶನಿವಾರ ಪೂರ್ತಿ ದಿನ ಇಲ್ಲಿಯೇ ಜನರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಪುನೀತ್ ಪುತ್ರಿ ವಂದಿತಾ ಜರ್ಮನಿಯಲ್ಲಿದ್ದು, ಶನಿವಾರ ಸಂಜೆ ಭಾರತಕ್ಕೆ ಮರಳುತ್ತಿದ್ದಾರೆ. ಪುನೀತ್ ಅಂತ್ಯಕ್ರಿಯೆ ಸರ್ಕಾರದ ಸಕಲ ಅಂತ್ಯಕ್ರಿಯೆಯೊAದಿಗೆ ಭಾನುವಾರ ಬೆಳಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಲಿದೆ. ಡಾ.ರಾಜ್ ಕುಮಾರ್ ಸಮಾಧಿ ಸ್ಥಳದ ಪಕ್ಕದಲ್ಲಿಯೇ ಪುನೀತ್ ಅಂತ್ಯಕ್ರಿಯೆ ನಡೆಯಲಿದೆ.

ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬೆಂಗಳೂರಿನಲ್ಲಿರುವ ಕಂಠೀರವ ಸ್ಟುಡಿಯೋದತ್ತ ಧಾವಿಸುತ್ತಿದ್ದಾರೆ. ಶೋಕತಪ್ತ ಅಭಿಮಾನಿಗಳನ್ನು ನಿಯಂತ್ರಿಸಲು ಸಾವಿರಾರು ಸಂಖ್ಯೆಯಲ್ಲಿ ನಿಯೋಜನೆಗೊಂಡಿರುವ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಅಣ್ಣಶಿವರಾಜ್ ಕುಮಾರ್ ನೋವು ನುಂಗಿಕೊAಡು ಶೋಕತಪ್ತರನ್ನು ಸಮಧಾನ ಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪತ್ನಿ ಅಶ್ವಿನಿಯ ನೋವು ಮುಗಿಲು ಮುಟ್ಟಿದೆ.

ಒಂದೇ ದಿನ ಸಂತೋಷ - ಬೇಸರ

ಕೋವಿಡ್ ಹಿನ್ನೆಲೆಯಲ್ಲಿ ಸ್ಘಗಿತಗೊಂಡಿದ್ದ ಚಿತ್ರೋದ್ಯಮ ಇತ್ತೀಚೆಗೆ ಚೇತರಿಸಿಕೊಂಡಿತ್ತು. ಒಂದೂವರೆ ವರ್ಷಗಳ ಬಳಿಕ ಶಿವರಾಜ್ ಕುಮಾರ್ ನಾಯಕರಾಗಿದ್ದ ಬಜರಂಗಿ - ೨ ರಾಜ್ಯವ್ಯಾಪಿ ತೆರೆಕಂಡಿತ್ತು. ಸಹಜವಾಗಿಯೇ ರಾಜ್ ಕುಟುಂಬ ಬೆಳಗ್ಗಿನಿಂದಲೇ ಭಜರಂಗಿ ಯಶಸ್ಸಿನ ಸಂಭ್ರಮದಲ್ಲಿತ್ತು. ಆದರೆ ಮಧ್ಯಾಹ್ನ ತಮ್ಮ ಕುಟುಂಬದ ಕಿರಿಯ ಪುನೀತ್ ನಿಧನ ದೊಡ್ಡಮನೆ ಸದಸ್ಯರಿಗೆ ಬರಸಿಡಿಲಿನಂತೆ ಅಪ್ಪಳಿಸಿತು. ರಾಜ್ಯವ್ಯಾಪಿ ಸಂತೋಷಸಾಗರದಲ್ಲಿ ತೇಲುತ್ತಿದ್ದ ಅಭಿಮಾನಿಗಳು ಪುನೀತ್ ಅಗಲಿಕೆಯಿಂದ ಶೋಕಸಾಗರದಲ್ಲಿ ಮುಳುಗಿದರು. ಭಜರಂಗಿ ೨ರ ಸಂಭ್ರಮ ಅರ್ಧ ದಿನಕ್ಕೆ ಮಾತ್ರ ಸೀಮಿತವಾಯಿತು.