ಮಡಿಕೇರಿ, ಅ. ೨೯: ಎರಡೂವರೆ ವರ್ಷಗಳ ಬಳಿಕ ಮಡಿಕೇರಿ ನಗರಸಭೆಯ ಅಧ್ಯಕ್ಷರಾಗಿ ೨೧ನೇ ವಾರ್ಡಿನ ಸದಸ್ಯೆ ನೆರವಂಡ ಅನಿತಾ ಪೂವಯ್ಯ ಹಾಗೂ ಉಪಾಧ್ಯಕ್ಷರಾಗಿ ೮ನೇ ವಾರ್ಡ್ ಸದಸ್ಯೆ ಸವಿತಾ ರಾಕೇಶ್ ೧೯ ಮತಗಳನ್ನು ಪಡೆದು ಬಹುಮತಗಳಿಂದ ಆಯ್ಕೆಯಾದರು.
ತಾ. ೧೧ ರಂದು ನಡೆಯಬೇಕಿದ್ದ ಚುನಾವಣೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರಿಗೆ ನೋಟೀಸ್ ನೀಡಿಲ್ಲ ಎಂಬ ಕಾರಣಕ್ಕೆ ಮುಂದೂಡಲಾಗಿತ್ತು. ಇಂದು ನಗರಸಭೆ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು ಚುನಾವಣಾಧಿಕಾರಿಯಾಗಿ ಪ್ರಕ್ರಿಯೆ ನಡೆಸಿದರು.
೧೯ ಮತ - ಕಾಂಗ್ರೆಸ್, ಜೆಡಿಎಸ್ ತಟಸ್ಥ
ಅಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪಿ.ಯಿಂದ ನೆರವಂಡ ಅನಿತಾ ಪೂವಯ್ಯ, ಎಸ್.ಡಿ.ಪಿ.ಐ.ನಿಂದ ನೀಮಾ ಹರ್ಷದ್, ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪಿ.ಯಿಂದ ಸವಿತಾ ರಾಕೇಶ್, ಎಸ್.ಡಿ.ಪಿ.ಐ.ನಿಂದ ಮೇರಿ ವೇಗಸ್ ಕಣದಲ್ಲಿದ್ದರು. ಮಧ್ಯಾಹ್ನ ೧ ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭವಾಯಿತು. ಬಿಜೆಪಿಯ ೧೬ ಸದಸ್ಯರು ಸೇರಿದಂತೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ವಿಧಾನಸಭಾ ಸದಸ್ಯ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಕೈ ಎತ್ತುವ ಮೂಲಕ ಬಿಜೆಪಿ ಸದಸ್ಯರಿಗೆ ಮತಚಲಾಯಿಸಿದರು. ಒಟ್ಟು ೧೯ ಮತಗಳನ್ನು ಪಡೆದ ಅನಿತಾ ಹಾಗೂ ಸವಿತಾ ಮುಂದಿನ ಎರಡೂವರೆ ವರ್ಷಗಳ ಅಧ್ಯಕ್ಷ-ಉಪಾಧ್ಯಕ್ಷರಾಗಿ ಸ್ಪಷ್ಟ ಬಹುಮತದಿಂದ ಗೆಲುವು ದಾಖಲಿಸಿದರು. ಎಸ್.ಡಿ.ಪಿ.ಐ.ನ ೫ ಸದಸ್ಯರು ಅವರ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾವಣೆ ಮಾಡಿದರು. ಜೆ.ಡಿ.ಎಸ್.ನ ಮುಸ್ತಾಫ ಮತ್ತು ಕಾಂಗ್ರೆಸ್ನ ರಾಜೇಶ್ ಯಲ್ಲಪ್ಪ ಮತ
(ಮೊದಲ ಪುಟದಿಂದ) ಚಲಾವಣೆ ಮಾಡದೆ ತಟಸ್ಥ ನಿಲುವು ತೋರಿದರು.
ಕೇಸರಿ - ಕನ್ನಡ ಶಾಲು
ಬಿಜೆಪಿಯ ನಗರಸಭಾ ಸದಸ್ಯರು ಕೇಸರಿ ಶಾಲು ಧರಿಸಿ ಬಂದಿದ್ದರೆ, ಎಸ್.ಡಿ.ಪಿ.ಐ.ನ ಸದಸ್ಯರು ಕನ್ನಡದ ಶಾಲು ಧರಿಸಿ ಭಾಗವಹಿಸಿದ್ದರು. ಅದಲ್ಲದೆ ಭಾರತ ಸಂವಿಧಾನದ ಪೀಠಿಕೆಯ ಭಿತ್ತಿಪತ್ರವನ್ನು ಎಸ್.ಡಿ.ಪಿ.ಐ. ಸದಸ್ಯರು ಪ್ರದರ್ಶಿಸಿದರು. ಭಾರತ ಬಹುಸಂಸ್ಕೃತಿ ಇರುವ ನೆಲವಾಗಿದೆ. ಇಲ್ಲಿ ಧರ್ಮದ ರಾಜಕಾರಣ ಬೇಡ ಎಂಬ ಸಂದೇಶ ನೀಡುವ ಸಲುವಾಗಿ ಭಿತ್ತಿಪತ್ರ ಪ್ರದರ್ಶಿಸಲಾಯಿತು. ಅಲ್ಲದೆ ಕನ್ನಡ ಶಾಲನ್ನು ಕನ್ನಡ ರಾಜ್ಯೋತ್ಸವ ಸಂಭ್ರಮ ಇರುವ ಹಾಗೂ ಕೇಂದ್ರದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸುವ ಸಲುವಾಗಿ ಧರಿಸಿದ್ದೇವೆ ಎಂದು ಸದಸ್ಯ ಅಮೀನ್ ಮೊಹ್ಸಿನ್ ತಿಳಿಸಿದರು.
ಮಾದರಿ ನಗರ ಮಾಡಿ - ರಂಜನ್
ಮಡಿಕೇರಿಯನ್ನು ಅತ್ಯುತ್ತಮ ನಗರವನ್ನಾಗಿ ಮಾಡಲು ಅಧ್ಯಕ್ಷರು-ಉಪಾಧ್ಯಕ್ಷ ಪಣ ತೊಡಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಕರೆ ನೀಡಿದರು. ರಾಜ್ಯದಲ್ಲಿಯೇ ಮಾದರಿ ನಗರಸಭೆಯನ್ನಾಗಿ ಮಾಡುವ ಮಹತ್ತರ ಜವಾಬ್ದಾರಿ ಅಧ್ಯಕ್ಷ-ಉಪಾಧ್ಯಕ್ಷರ ಮೇಲಿದೆ. ನಗರಸಭೆ ಇತರ ಸದಸ್ಯರುಗಳ ಸಹಕಾರ ಪಡೆದು ಕೆಲಸ ಮಾಡಿ. ಒಗ್ಗಟ್ಟಿನಿಂದ ಮುನ್ನಡೆಯಿರಿ. ಗೊಂದಲಗಳಿಗೆ ಆಸ್ಪದ ನೀಡಬೇಡಿ ಎಂದು ಸಲಹೆ ನೀಡಿದರು.
ಒಳ್ಳೆಯ ಅವಕಾಶ - ಸುನಿಲ್
ಸಾಮಾಜಿಕ ಬದಲಾವಣೆ ತರಬೇಕಾದರೆ ಅದು ಅಧಿಕಾರದಿಂದ ಸಾಧ್ಯ. ಒಳ್ಳೆಯ ಅವಕಾಶ ಅನಿತಾ ಪೂವಯ್ಯ ಹಾಗೂ ಸವಿತಾ ರಾಕೇಶ್ ಅವರಿಗೆ ದೊರೆತಿದ್ದು, ಇದನ್ನು ಸದ್ಭಳಕೆ ಮಾಡಿಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹೇಳಿದರು.
ನಗರಸಭಾ ಸದಸ್ಯ ಕೆ.ಎಸ್.ರಮೇಶ್ ಮಾತನಾಡಿ, ಮಡಿಕೇರಿ ನಗರಸಭೆಗೆ ಎರಡೂವರೆ ವರ್ಷಗಳ ಬಳಿಕ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಜನರ ಆಶೋತ್ತರಗಳಿಗೆ ಸ್ಪಂದನ ನೀಡುವ ಕೆಲಸ ನಮ್ಮಿಂದಾಗಬೇಕು. ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ಸಂಸದರು, ಶಾಸಕರನ್ನು, ಅಧಿಕಾರಿಗಳನ್ನು, ನಗರಸಭೆ ಸದಸ್ಯರಗಳ ವಿಶ್ವಾಸ ಗಳಿಸಿ ಕೆಲಸ ಮಾಡಬೇಕು. ವಿಶೇಷ ಅನುದಾನ ತರಲು ಪ್ರಯತ್ನ ಪಡಬೇಕು. ಮೂಲಭೂತ ವ್ಯವಸ್ಥೆಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಸದಸ್ಯ ಅರುಣ್ ಶೆಟ್ಟಿ ಮಾತನಾಡಿ, ಗುಂಪುಗಾರಿಕೆ ಇಲ್ಲದ ಅಧಿಕಾರವನ್ನು ನಮ್ಮ ಅಧಿಕಾರವಧಿ ಯಲ್ಲಿ ನೀಡಬೇಕು. ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದರು.
ಎಸ್.ಡಿ.ಪಿ.ಐ. ಬೆಂಬಲಿತ ಸದಸ್ಯ ಅಮೀನ್ ಮೊಹ್ಸಿನ್ ಮಾತನಾಡಿ, ನಾವುಗಳು ಪ್ರಬಲ ವಿಪಕ್ಷವಾಗಿ ಇರುತ್ತೇವೆ. ವೈಫಲ್ಯವನ್ನು ಪ್ರಶ್ನಿಸುತ್ತೇವೆ. ನಿಮ್ಮಿಂದ ಉತ್ತಮ ಆಡಳಿತದ ನಿರೀಕ್ಷೆ ಇದೆ. ಕಳೆದ ಬಾರಿ ಲಾಟರಿಯಿಂದ ಅಧ್ಯಕ್ಷ ಸ್ಥಾನವನ್ನು ಅನಿತಾ ಕಳೆದುಕೊಂಡಿದ್ದರು. ಈ ಬಾರಿ ಯಾವುದೇ ಗೊಂದಲಗಳಿಲ್ಲದೆ ಅಧಿಕಾರ ಒಲಿದು ಬಂದಿದೆ. ರಾಜಕೀಯ ಸಿದ್ಧಾಂತ ಬದಿಗೊತ್ತಿ ನಗರದ ಅಭಿವೃದ್ಧಿಗೆ ಕಟಿಬದ್ಧರಾಗಿರ ಬೇಕು. ಮಡಿಕೇರಿ ಅಭಿವೃದ್ಧಿಗೆ ಬಿಡುಗಡೆಯಾಗಿರುವ ರೂ. ೭೫ ಲಕ್ಷವನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಹೇಳಿದರು.
ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ ಮಾತನಾಡಿ, ನಗರಸಭೆಯ ಇಂಜಿನಿಯರಿAಗ್ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ನಗರಸಭಾ ಪೌರಾಯುಕ್ತ ರಾಮದಾಸ್ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಜಿಲ್ಲಾಧ್ಯಕ್ಷ ಭಾರತೀಶ್, ನಾಪಂಡ ಕಾಳಪ್ಪ, ಕುಞಂಗಡ ಅರುಣ್ ಭೀಮಯ್ಯ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹರೀಶ್, ಮಡಿಕೇರಿ ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್ ಪ್ರಮುಖರಾದ ಉಷಾ ದೇವಮ್ಮ ಸೇರಿದಂತೆ ಹಲವರು ಹಾಜರಿದ್ದರು.
ಅಧ್ಯಕ್ಷರ ಕಚೇರಿಗೆ ಪೂಜೆ
ಪ್ರಕ್ರಿಯೆ ಮುಗಿದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದ ಬಳಿಕ ಅವರವರ ಕಚೇರಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಧ್ಯಕ್ಷೆ ನೆರವಂಡ ಅನಿತಾ ಹಾಗೂ ಉಪಾಧ್ಯಕ್ಷೆ ಸವಿತಾ ರಾಕೇಶ್ ಅವರ ಕಚೇರಿಯಲ್ಲಿ ಪೂಜಾ ಕೈಂಕರ್ಯ ನಡೆಸಲಾಯಿತು. ಗಣಪತಿ ಪೂಜೆಯ ಮೂಲಕ ವಿಘ್ನ ಎದುರಾಗದಂತೆ ಪ್ರಾರ್ಥಿಸಲಾಯಿತು. ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ ಸೇರಿದಂತೆ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು. ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಜಯಘೋಷ ಕೂಗಿ ಸಂಭ್ರಮಾಚರಿಸಿದರು.
೭ ವರ್ಷಗಳ ಬಳಿಕ ಬಿಜೆಪಿಗೆ ಅಧಿಕಾರ
೭ ವರ್ಷಗಳ ಹಿಂದೆ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ನಡೆಸಿತ್ತು. ಅಂದು ಪಿ.ಡಿ.ಪೊನ್ನಪ್ಪ ಅಧ್ಯಕ್ಷರಾಗಿ, ಉಪಾಧ್ಯಕ್ಷೆಯಾಗಿ ಲತಾ ಬಂಗೇರ ಇದ್ದರು. ಅದಾದ ಬಳಿಕ ನಂದಕುಮಾರ್ ಸಹಾಯದಿಂದ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಇದಾದ ಬಳಿಕ ಯಾವುದೇ ಗೊಂದಲಗಳಿಲ್ಲದೆ ಬಿಜೆಪಿ ಸ್ಪಷ್ಟಬಹುಮತದಲ್ಲಿ ಅಧಿಕಾರ ಪಡೆದುಕೊಂಡಿದೆ.