ಕಣಿವೆ, ಅ. ೨೮: ಇಲ್ಲಿಗೆ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷ ಚೆಲುವರಾಜು ಅಧ್ಯಕ್ಷತೆಯಲ್ಲಿ ನಡೆಯಿತು.
ಆರಂಭದಲ್ಲಿ ಗ್ರಾಮಸಭೆಗೆ ಸರ್ಕಾರದ ೨೮ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ ಮಾಹಿತಿಗಳನ್ನು ಗ್ರಾಮ ನಿವಾಸಿಗಳಿಗೆ ಒದಗಿಸಬೇಕೆಂಬ ನಿಯಮವಿದ್ದರೂ ಕೂಡ ಐದಾರು ಇಲಾಖೆಗಳ ಅಧಿಕಾರಿಗಳು ಹೊರತುಪಡಿಸಿ ಉಳಿದ ಇಲಾಖೆಗಳ ಅಧಿಕಾರಿಗಳು ಸಭೆಗೆ ಆಗಮಿಸದ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.
ಮುಳ್ಳುಸೋಗೆಯ ಕಾವೇರಿ ನದಿಗೆ ತೆರಳುವ ರಸ್ತೆಯಲ್ಲಿ ಪಾದಚಾರಿಗಳು ಸಂಚರಿಸಲು ಅಸಾಧ್ಯವಾದ ರೀತಿಯಲ್ಲಿ ಕಸ ತ್ಯಾಜ್ಯ ಗಳನ್ನು ತಂದು ಸುರಿಯಲಾಗುತ್ತಿದೆ. ಇದರಿಂದ ಸಮೀಪವೇ ಇರುವ ಶಾಲಾ ಮಕ್ಕಳು ಹಾಗು ಶಿಕ್ಷಕರಿಗೂ ಸಮಸ್ಯೆಯಾಗುತ್ತಿದೆ. ಕೂಡಲೇ ಕಸ ತ್ಯಾಜ್ಯ ಮುಕ್ತ ರಸ್ತೆಯಾಗಿಸಿ ಎಂದು ಗ್ರಾಮದ ಕೆಲವು ಮಹಿಳೆಯರು ದೂರಿಕೊಂಡರು. ಇದೇ ವಿಚಾರವನ್ನು ಪ್ರಸ್ತಾಪಿಸಿದ ಗ್ರಾ.ಪಂ. ಮಾಜಿ ಸದಸ್ಯ ಎಂ.ಎಸ್. ರಾಜೇಶ್ ಹಾಗೂ ಕಾವಲು ಪಡೆ ಅಧ್ಯಕ್ಷ ಎಂ. ಕೃಷ್ಣ ಕಸ ತ್ಯಾಜ್ಯ ಹರಡಿ ಮಹಿಳೆಯರು ಮಕ್ಕಳು ಮುಖ ಹಾಕಿ ತಿರುಗಾಡದ ರೀತಿಯಲ್ಲಿ ಪರಿಸರ ಹಾಳು ಮಾಡುತ್ತಿರುವ ಬಗ್ಗೆ ಶಕ್ತಿ ಪತ್ರಿಕೆಯಲ್ಲಿ ವರದಿ ಬಂದಿದೆ. ಇಂತಹ ಕಸ ಹಾಕಿ ಪರಿಸರ ಹಾಳು ಮಾಡುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳ ಬೇಕೆಂದು ಎಂ.ಎಸ್. ರಾಜೇಶ್ ಸಭೆಯಲ್ಲಿ ಆಗ್ರಹಿಸಿದರು.
ಮುಳ್ಳುಸೋಗೆ ಗ್ರಾಮದಲ್ಲಿರುವ ಕೋಳಿ ಹಾಗೂ ಹಂದಿ ಮಾಂಸಗಳ ಮಾರಾಟದ ಮಳಿಗೆಗಳಲ್ಲಿ ಗ್ರಾಹಕರಿಂದ ಇತರೆಡೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಪಂಚಾಯಿತಿ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮುಳ್ಳುಸೋಗೆಯ ಎಂ. ಕೃಷ್ಣ ಹೇಳಿದರು. ಅಂಗವಿಕಲರಿಗೆAದು ಸರ್ಕಾರ ಪಂಚಾಯಿತಿಗೆ ನೀಡುವ ಸೋಲಾರ್ ದೀಪಗಳನ್ನು ಪಂಚಾಯಿತಿಯ ಸದಸ್ಯರ ಮನೆ ಬಾಗಿಲಿಗೆ ಹಾಕಲಾಗಿದೆ. ಮುಳ್ಳುಸೋಗೆ ಗ್ರಾಮಕ್ಕೆ ಕುಡಿಯುವ ನೀರನ್ನು ಜಲಮಂಡಳಿ ಹರಿಸುತ್ತಿದ್ದು, ಸಾರ್ವಜನಿಕ ನಲ್ಲಿಗಳಿಂದ ಮಾಸಿಕ ೧೪ ಸಾವಿರ ಹಾಗೂ ಸಾರ್ವಜನಿಕ ರಿಂದಲೂ ಜಲಮಂಡಳಿ ಹಣ ವಸೂಲಿ ಮಾಡುತ್ತಿದ್ದು, ಸಣ್ಣ ಪುಟ್ಟ ದುರಸ್ತಿಗೂ ಜಲಮಂಡಳಿ ಹಣ ವ್ಯಯಿಸಬೇಕು. ಆದರೆ ಪಂಚಾಯಿತಿ ಯವರು ಕುಡಿಯುವ ನೀರಿನ ಪೈಪ್‌ಗಳ ದುರಸ್ತಿಗೆಂದು ಬೇಕಾಬಿಟ್ಟಿಯಾಗಿ ಹಣ ಅಪವ್ಯಯ ಮಾಡುತ್ತಿದೆ. ಇದು ಕೂಡಲೇ ನಿಲ್ಲಬೇಕು ಎಂದು ಮುಳ್ಳುಸೋಗೆಯ ರಾಜೇಶ್ ಆಗ್ರಹಿಸಿದರು. ಮುಳ್ಳುಸೋಗೆ ಗ್ರಾಮದಲ್ಲಿ ಜಲಮಂಡಳಿಯ ಕಾಮಗಾರಿಯಿಂದಾಗಿ ರಸ್ತೆಗಳು ಕಿತ್ತು ನಿಂತಿದ್ದು, ಪಾದಚಾರಿಗಳು ಕಾಲಿಡುವಂತಿಲ್ಲ. ಅಷ್ಟರ ಮಟ್ಟಿಗೆ ಕುಲಗೆಟ್ಟಿವೆ ಎಂದು ನಿವಾಸಿ ಚಂದ್ರಶೇಖರ್ ದೂರಿದರು. ಬಸವೇಶ್ವರ ಬಡಾವಣೆಯ ಮೂರನೇ ಬ್ಲಾಕಿನಲ್ಲಿ ನಿವಾಸಿಗಳೇ ಸೇರಿ ಹಣ ಹಾಕಿ ೫ ವಿದ್ಯುತ್ ಕಂಭಗಳನ್ನು ಹಾಕಿಸಿದ್ದೆವು. ಆದರೆ ಇದೂವರೆಗೂ ಪಂಚಾಯಿತಿ ಕಡೆಯಿಂದ ಚರಂಡಿಯಾಗಲೀ ರಸ್ತೆಯಾಗಲೀ ಮಾಡಿಸಿಲ್ಲ. ಏಕೆ ನಮ್ ವಾರ್ಡ್ ಬಗ್ಗೆ ಇಷ್ಟೊಂದು ನಿರಾಸಕ್ತಿ ? ಮುಳ್ಳುಸೋಗೆ ಪಂಚಾಯಿತಿಯಿAದ ನಮ್ಮನ್ನು ಕೈಬಿಟ್ಟು ಬಿಡಿ ಎಂದು ಅಲ್ಲಿನ ನಿವಾಸಿ ನಿವೃತ್ತ ಶಿಕ್ಷಕ ರಾಜು ದೂರಿದರು. ಗ್ರಾಮ ನಿವಾಸಿಗಳು ಹಾಗೂ ಸಾರ್ವಜನಿಕರು ಪಂಚಾಯಿತಿ ಕಚೇರಿಗೆ ಧಾವಿಸಲು ಮುಖ್ಯ ರಸ್ತೆಯ ಬದಿ ಕೆಸರಿನಿಂದ ಆವೃತವಾಗಿದೆ. ಕೂಡಲೇ ಪಂಚಾಯಿ ತಿಯವರು ಇಲ್ಲಿ ಪಾದಚಾರಿ ಮಾರ್ಗ ಮಾಡಿ ಇಂಟರ್ ಲಾಕ್ ಅಳವಡಿಸ ಬೇಕೆಂದು ಎಂ.ಕೆ. ಗಣೇಶ್ ಒತ್ತಾಯಿ ಸಿದರು. ಮುಳ್ಳುಸೋಗೆ ಗುಮ್ಮನಕೊಲ್ಲಿ ಗ್ರಾಮದ ವಿವಿಧ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲು ಅಳವಡಿಸಿರುವ ಪೈಪುಗಳು ಹಳೆಯದಾಗಿ ಹಾಳಾಗುತ್ತಿವೆ. ಅವುಗಳನ್ನು ಕೂಡಲೇ ಬದಲಿಸಬೇಕು. ನಿವಾಸಿಗಳಿಗೆ ಸಮರ್ಪಕವಾದ ಕುಡಿವ ನೀರು ಪೂರೈಸಬೇಕೆಂದು ಹೆಚ್.ಎಸ್. ರಾಮಶೆಟ್ಟಿ ಒತ್ತಾಯಿಸಿದರು.
ಕುಶಾಲನಗರದ ನೂತನ ತಾಲೂಕು ಕಚೆೆÃರಿ ಬಳಿಯ ನೆಮ್ಮದಿ ಕೇಂದ್ರದ ಬಳಿ ವಿವಿಧ ದಾಖಲಾತಿ ಪಡೆಯಲು ಸಾರ್ವಜನಿಕರ ನೂಕು ನುಗ್ಗಲನ್ನು ನಿಯಂತ್ರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಕುಂಜಿಲನ ರಮೇಶ್ ಒತ್ತಾಯಿಸಿದರು.
ಮುಳ್ಳುಸೋಗೆ, ಗುಮ್ಮನಕೊಲ್ಲಿ ಹಾಗೂ ಗೊಂದಿಬಸವನಹಳ್ಳಿ ಗ್ರಾಮಗಳ ಶಾಲಾವರಣ ಹಾಗೂ ಮೈದಾನಗಳಲ್ಲಿ ಪಾನಗೋಷ್ಠಿ ನಡೆಯುತ್ತಿದ್ದು ದಿನನಿತ್ಯ ಶಿಕ್ಷಕರಿಗೆ ಮದ್ಯದ ಖಾಲಿ ಬಾಟಲಿಗಳನ್ನು ಹೆರಕುವುದೇ ಕೆಲಸವಾಗುತ್ತಿದೆ. ಗ್ರಾಮಸ್ಥರು ಈ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಊರಿನ ಶಾಲಾವರಣ ಗಳನ್ನು ಸ್ವಚ್ಛಂದವಾಗಿ ಇಟ್ಟುಕೊಳ್ಳಬೇಕು ಎಂದು ಶಿಕ್ಷಣ ಇಲಾಖೆಯ ಸಿಆರ್ ಪಿ ಸಂತೋಷ್ ಕುಮಾರ್ ಸಭೆಯಲ್ಲಿ ಹೇಳಿದರು.
ಶಾಲಾವರಣಗಳಲ್ಲಿ ಮದ್ಯ ಸೇವಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ರಾಜೇಶ್ ಹಾಗೂ ಕೃಷ್ಣ ಪಂಚಾಯಿತಿ ಅಧಿಕಾರಿಗಳನ್ನು ಆಗ್ರಹಿಸಿದರು.
ಗೊಂದಿಬಸವನಹಳ್ಳಿಯ ನಿವಾಸಿ ಗಾರೆಕೆಲಸ ವೃತ್ತಿಯ ಮಹೇಶ್ ಎಂಬವರ ಬಳಿ ವಾಸದ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಎನ್ ಒ ಸಿ ನೀಡಲು ೧೨ ಸಾವಿರ ರೂಗಳನ್ನು ಪಡೆದು ರಸೀದಿ ನೀಡಲಾಗಿದೆ. ಅಮಾಯಕ ವ್ಯಕ್ತಿಗಳಿಂದ ಈ ರೀತಿ ಹಣ ಪಡೆಯುವುದು ಸರಿಯಾದ ಕ್ರಮವಲ್ಲ. ಪೈಸಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ವ್ಯಕ್ತಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಅಭಿವೃದ್ಧಿ ಶುಲ್ಕ ಎಂದು ೭೭೭೬ ರೂಗಳನ್ನು, ಕಟ್ಟಡ ತೆರಿಗೆಗೆಂದು ೭೫೦ ರೂಗಳನ್ನು ಇತರೇ ಶುಲ್ಕ ಎಂದು ೧೭೨೪ ರೂಗಳನ್ನು ವಸೂಲಿ ಮಾಡಿರುವುದು ಎಷ್ಟು ಸರಿ? ಕೂಲಿ ಕಾರ್ಮಿಕ ಬಡ ನಿವಾಸಿಗಳ ಮೇಲೆ ಪಂಚಾಯಿತಿ ಮಾಡುತ್ತಿರುವ ಸುಲಿಗೆಯಲ್ಲವೇ ಇದು ಎಂದು ಪಂಚಾಯಿತಿ ಮಾಜಿ ಸದಸ್ಯ ರಾಜೇಶ್ ಗಂಭೀರವಾಗಿ ಆಪಾದಿಸಿದರು.
ಪಂಚಾಯಿತಿ ಅಧ್ಯಕ್ಷ ಚೆಲುವರಾಜು ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಎರಡು ವರ್ಷಗಳ ಬಳಿಕ ನಡೆದ ಗ್ರಾಮಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿವಾಸಿಗಳು ಭಾಗವಹಿಸಿದ್ದರು.
ಪಂಚಾಯಿತಿಯ ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಶಿವಾನಂದ, ಜಗದೀಶ್, ಮುರುಳೀಧರ್, ಪದ್ಮಾವತಿ, ವೇದಾವತಿ, ರಮೇಶ್ ಮೊದಲಾದ ವರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಇದ್ದರು.