ಗೋಣಿಕೊಪ್ಪಲು, ಅ. ೨೮: ವಿಶ್ವವನ್ನು ತಲ್ಲಣಗೊಳಿಸಿದ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ದೇಶ ಹೊಸ ಮೈಲುಗಲ್ಲು ಸಾಧಿಸಿದ್ದು ದೇಶದಲ್ಲಿ ನೂರು ಕೋಟಿ ಉಚಿತ ಲಸಿಕೆ ನೀಡುವ ಮೂಲಕ ಉತ್ತಮ ಸಾಧನೆ ಮಾಡಿದೆ ಎಂದು ವೀರಾಜಪೇಟೆ ಮಂಡಲ ಬಿಜೆಪಿಯ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್ ಹೇಳಿದರು.
ಗೋಣಿಕೊಪ್ಪ ಶಕ್ತಿ ಕೇಂದ್ರ ಹಾಗೂ ವೀರಾಜಪೇಟೆ ಬಿಜೆಪಿ ಮಂಡಲದ ವತಿಯಿಂದ ಗೋಣಿಕೊಪ್ಪಲುವಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಲಸಿಕೆ ಕೇವಲ ಭಾರತ ಮಾತ್ರವಲ್ಲದೆ ವಿಶ್ವದ ಕೋಟ್ಯಾಂತರ ಮಂದಿಯ ಜೀವ ಉಳಿಸಿದೆ ಎಂದ ಅವರು ಇಂತಹ ಕಾರ್ಯಕ್ಕೆ ಹಗಲಿರುಳು ಶ್ರಮಿಸಿದ ವೈದ್ಯರು, ದಾದಿಯರು ಹಾಗೂ ಆಶಾ ಕಾರ್ಯಕರ್ತರನ್ನು ಗುರುತಿಸಿ ಗೌರವಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಗ್ರೀಷ್ಮ ಬೋಜಮ್ಮ, ಡಾ. ಸುರೇಶ್, ದಾದಿಯರು, ಆಶಾ ಕಾರ್ಯಕರ್ತೆಯರು ಸನ್ಮಾನ ಸ್ವೀಕರಿಸಿದರು. ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ವಾಟೇರಿರ ಬೋಪಣ್ಣ, ಅಜ್ಜಿಕುಟ್ಟೀರ ಪ್ರವೀಣ್, ಗೋಣಿಕೊಪ್ಪ ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್ ರೈ, ಬಿಜೆಪಿ ಒಬಿಸಿ ಮೋರ್ಚಾದ ತಾಲೂಕು ಅಧ್ಯಕ್ಷ ಕೆ. ರಾಜೇಶ್,ವಿವಿಧ ಪದಾಧಿಕಾರಿಗಳಾದ ಬಿ.ಎನ್. ಪ್ರಕಾಶ್, ಸೌಮ್ಯಬಾಲು, ರಾಮಕೃಷ್ಣ, ಜ್ಯೋತಿ, ಸುಬ್ರಮಣಿ, ಹಕೀಮ್, ನೂರೆರ ರಂಜಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.