ಕೂಡಿಗೆ, ಅ. ೨೬: ಶಿರಂಗಾಲದಲ್ಲಿ ಫೆಬ್ರವರಿ ೨೧ ರಂದು ಬಾರ್‌ವೊಂದರ ಮುಂಭಾಗದಲ್ಲಿ ಮರವೊಂದರ ಬಳಿ ಸಾವನ್ನಪ್ಪಿದ್ದ ವ್ಯಕ್ತಿಯೊಬ್ಬನ ಶವವನ್ನು ಸುಮಾರು ೮ ತಿಂಗಳ ಬಳಿಕ ಮಣ್ಣಿನಿಂದ ಹೊರ ತೆಗೆದು ಮರುಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಘಟನೆ ಇಂದು ನಡೆದಿದೆ.
ರಘು ಎಂಬಾತ ಫೆ. ೨೧ ರಂದು ಸಾವನ್ನಪ್ಪಿದ್ದು, ಆತನ ಶವವನ್ನು ಶಿರಂಗಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಹೂತು ಹಾಕಲಾಗಿತ್ತು. ಆದರೆ ಆತನ ಸಹೋದರಿ ಬೆಂಗಳೂರಿನ ಲಕ್ಷಿö್ಮ ಕೃಷ್ಣ ನಾಯಕ್ ಎಂಬವರು ರಘು ಸಾವಿನ ಬಗ್ಗೆ ಕೊಲೆ ಶಂಕೆ ವ್ಯಕ್ತಪಡಿಸಿ ಎಸ್ಸಿಎಸ್‌ಟಿ ಆಯೋಗಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಯೋಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ನೀಡಿದ ಸೂಚನೆಯನ್ವಯ ಇಂದು ವೀರಾಜಪೇಟೆ ಡಿವೈಎಸ್‌ಪಿ ಜಯಕುಮಾರ್ ನೇತೃತ್ವದಲ್ಲಿ ತಹಶೀಲ್ದಾರ್ ಗೋವಿಂದ ರಾಜು ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಹೂತು ಹಾಕಲಾಯಿತು. -ಕೆ.ಕೆ.ಎನ್.