ಆಲೂರುಸಿದ್ದಾಪುರ, ಅ. ೨೬: ಕೋವಿಡ್ ನಿಯಮ ಉಲ್ಲಂಘನೆ ಯಾಗುತ್ತದೆ ಎಂಬ ಕಾರಣಕ್ಕಾಗಿ ಈದ್ ಮಿಲಾದ್ ಮೆರವಣಿಗೆಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಎದುರು ಮಸೀದಿಯ ಪ್ರಮುಖರು ಮಸೀದಿಯಲ್ಲೇ ಈದ್ ಮಿಲಾದ್ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಿದ ಘಟನೆ ನಡೆಯಿತು.

ಸಮಿಪದ ಗುಡುಗಳಲೆ ಹನಫಿ ಜಾಮೀಯ ಮಸೀದಿ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಮಂಗಳವಾರ ಶನಿವಾರಸಂತೆ ಕೆಆರ್‌ಸಿ ವೃತ್ತದಿಂದ ಗುಡುಗಳಲೆ ಜಾಮೀಯಾ ಮಸೀದಿ ವರೆಗೆ ಬೃಹತ್ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿತ್ತು. ಆದರೆ ಶನಿವಾರಸಂತೆಯ ವಿವಿಧ ಹಿಂದೂಪರ ಸಂಘಟನೆಯ ಪ್ರಮುಖರಾದ ಎಸ್.ಎನ್. ರಘು, ಹರೀಶ್, ರಕ್ಷಿತ್, ತನ್ಮಯ್, ಧನಂಜಯ್, ಅಚ್ಚುತ, ಯತೀಶ್, ಪ್ರಜ್ವಲ್, ಯಶ್ವಂತ್, ಪುನೀತ್ ಹಾಗೂ ಮತ್ತಿತರ ಕಾರ್ಯಕರ್ತರು ಶನಿವಾರಸಂತೆ ಪೊಲೀಸ್ ಠಾಣೆ ಎದುರು ಜಮಾಯಿಸಿ ಈದ್ ಮಿಲಾದ್ ಪ್ರಯುಕ್ತ ಮೆರವಣಿಗೆಯಿಂದ ಕೋವಿಡ್ ನಿಯಮ ಉಲ್ಲಂಘಿಸಿ ದಂತಾಗುತ್ತದೆ. ಆದ್ದರಿಂದ ಮೆರವಣಿಗೆ ನಡೆಸಲು ಅವಕಾಶ ನೀಡಬಾರದೆಂದು ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ಮಾಡಿದರು.

ಈ ಸಂದರ್ಭ ವೃತ್ತ ನಿರೀಕ್ಷಕರು ಮತ್ತು ಹಿಂದೂಪರ ಸಂಘಟನೆಯ ಪ್ರಮುಖರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಈದ್ ಮಿಲಾದ್ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಗೆ ಕಾರ್ಯಕ್ರಮವನ್ನು ಕೈಬಿಟ್ಟ ಜಾಮೀಯಾ ಮಸೀದಿಯ ಪ್ರಮುಖರು ಗುಡುಗಳಲೆ ಜಾತ್ರ ಮೈದಾನದಲ್ಲಿರುವ ಪ್ರವೇಶ ದ್ವಾರದಿಂದ ಮಸೀದಿವರೆಗೆ ಮಾತ್ರ ಮೆರವಣಿಗೆ ನಡೆಸಿ ಮಸೀದಿಯಲ್ಲಿ ಈದ್ ಮಿಲಾದ್ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭ ಜಾಮೀಯಾ ಮಸೀದಿ ಅಧ್ಯಕ್ಷ ಅನ್ವರ್, ಪ್ರಮುಖರಾದ ಅಕ್ಮಲ್ ಪಾಷ, ಅಜಾರ್, ಮುಜಾಹಿದ್ ಪಾಷ, ಮಹಮದ್ ರಶೀದ್, ಹಸೈನಾರ್ ಕಾಜೂರ್ ಮುಂತಾದವರು ಇದ್ದರು.