ಕುಶಾಲನಗರ, ಅ. ೨೬: ಕುಶಾಲನಗರ ಸರಕಾರಿ ಆರೋಗ್ಯ ಸಮುದಾಯ ಕೇಂದ್ರದಲ್ಲಿ ೩ದಿನಗಳ ಹಿಂದೆ ಜನಿಸಿದ ಮಗುವೊಂದು ಮೃತಪಟ್ಟ ಹಿನ್ನೆಲೆಯಲ್ಲಿ ಮಗುವಿನ ಪೋಷಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆಯಿತು.

ಸಮೀಪದ ಚನ್ನಕಲ್ ಕಾವಲ್ ಗ್ರಾಮದ ಪ್ರಸನ್ನ ಎಂಬವರ ಪತ್ನಿ ನಳಿನಿ ಹೆರಿಗೆಗೆಂದು ಕುಶಾಲನಗರ ಆಸ್ಪತ್ರೆಗೆ ಭಾನುವಾರ ದಾಖಲಾಗಿದ್ದರು.

ನಳಿನಿ ಭಾನುವಾರ ಹೆಣ್ಣು ಮಗು ವಿಗೆ ಜನ್ಮ ನೀಡಿದ್ದು, ಮಂಗಳವಾರ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಇದರಿಂದ ಆಕ್ರೋಶ ಗೊಂಡ ಮಗುವಿನ ಪೋಷಕರು ವೈದ್ಯರು ಮಗುವಿನ ಆರೈಕೆ ಸರಿಯಾಗಿ ಮಾಡಿಲ್ಲ ಇದರಿಂದ ಮಗು ಮೃತಪಟ್ಟಿದೆ ಎಂದು ದೂರಿದ್ದಾರೆ.

ಈ ಸಂದರ್ಭ ಆಸ್ಪತ್ರೆಗೆ ಪೊಲೀಸರು ಆಗಮಿಸಿ ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಪೋಷಕರು ಸಮಾಧಾನಗೊಳ್ಳದೆ ಮಗುವಿನ ಮೃತ ದೇಹವನ್ನು ಆಸ್ಪತ್ರೆಯಲ್ಲೇ ಇಟ್ಟು ತಮಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಧುಸೂದನ್ ಪೋಷಕರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು. ಕರ್ತವ್ಯ ನಿರತ ವೈದ್ಯರ ನಿರ್ಲಕ್ಷö್ಯ ಇದ್ದಲ್ಲಿ ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು. ನಂತರ ಪೋಷಕರು ಸಮಾಧಾನಗೊಂಡು ಮಗುವಿನ ಮೃತದೇಹವನ್ನು ತಮ್ಮ ಊರಿಗೆ ಕೊಂಡೊಯ್ಯಲು ಮುಂದಾದರು.