ಮಡಿಕೇರಿ, ಅ. ೨೬: ಕೊಡವ ಮಕ್ಕಡ ಕೂಟ ಪ್ರಕಾಶನದ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರು ಬರೆದ ‘ಏಳ್ ರಂಗ್' ಪುಸ್ತಕವನ್ನು ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಪೆಮ್ಮಡಿಯಂಡ ವೇಣು ಅಪ್ಪಣ್ಣ ಹಾಗೂ ಕೊಡವ ಚಿತ್ರ ನಿರ್ಮಾಪಕಿ ಕೊಟ್ಟುಕತ್ತಿರ ಯಶೋಧ ಕಾರ್ಯಪ್ಪ ಬಿಡುಗಡೆಗೊಳಿಸಿದರು.

ಪೆಮ್ಮಡಿಯಂಡ ವೇಣು ಅಪ್ಪಣ್ಣ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಸಾಹಿತ್ಯ ಅಭಿರುಚಿ ಇರುವುದರಿಂದ ಪುಸ್ತಕ ಬಿಡುಗಡೆಗೆ ಸಹಕಾರ ನೀಡಿದ್ದೇನೆ. ಲೇಖಕಿ ಕಾವೇರಿ ಉತ್ತಮ ಕೃತಿ ಹೊರತಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕ ಪ್ರಕಟಿಸುವಂತಾಗಲಿ. ಕೊಡವ ಮಕ್ಕಡ ಕೂಟ ಉತ್ತಮ ಕೆಲಸ ಮಾಡುತ್ತಿದ್ದು, ಅಧ್ಯಕ್ಷ ಬೊಳಜಿರ ಅಯ್ಯಪ್ಪ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿರ್ಮಾಪಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಮಾತನಾಡಿ, ಆಧುನಿಕ ಯುಗದಲ್ಲಿ ಪುಸ್ತಕ ಓದುವರ ಸಂಖ್ಯೆ ಕ್ಷೀಣಿಸಿದ್ದು, ಓದುವ ಅಭ್ಯಾಸ ಮೈಗೂಡಿಸಿಕೊಳ್ಳಬೇಕು. ಪುಸ್ತಕ ಪ್ರಕಟವಾದರೆ ಮಾತ್ರ ಅದಕ್ಕೆ ಮೌಲ್ಯ ದೊರೆಯುತ್ತದೆ. ಲೇಖಕರಿಗ ವೇದಿಕೆ ನೀಡುತ್ತಿರುವ ಸಂಘಟನೆ ಕಾರ್ಯ ಶ್ಲಾಘನೀಯ ಎಂದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ಈವರೆಗೂ ೫೦ ಪುಸ್ತಕಗಳನ್ನು ಸಂಘಟನೆ ವತಿಯಿಂದ ಬಿಡುಗಡೆ ಗೊಳಿಸಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲಾಗಿದೆ. ೫೧ನೇ ಪುಸ್ತಕವಾಗಿ ಏಳು ಸಣ್ಣ ಕಥೆಗಳಿರುವ ‘ಏಳ್ ರಂಗ್' ಪುಸ್ತಕ ಬಿಡುಗಡೆಯಾಗಿದೆ. ಬಿಡುಗಡೆಯಾಗಿರುವ ೫೦ ಕೃತಿಗಳ ಪೈಕಿ ೫ ಕೃತಿಗಳಿಗೆ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನೀಡಲಾಗುವ ಪ್ರಶಸ್ತಿ ಪಡೆದುಕೊಂಡಿವೆ. ೨ ಪುಸ್ತಕಗಳನ್ನು ಆಧರಿಸಿ ಕೊಡವ ಭಾಷೆಯ ಸಿನಿಮಾ ನಿರ್ಮಾಣವಾಗಿ ಯಶಸ್ವಿಯಾಗಿವೆ. ಕಾವೇರಿ ಉದಯ ಬರೆದ ೨೦ನೇ ಪುಸ್ತಕ ಇದಾಗಿದೆ ಎಂದು ತಿಳಿಸಿದರು. ಲೇಖಕಿ ಕಾವೇರಿ ಉದಯ ಮಾತನಾಡಿ, ಪುಸ್ತಕದಲ್ಲಿ ದಾಖಲಾಗಿರುವ ಏಳು ಕಥೆಗಳು ಒಂದೊAದು ಬಣ್ಣವನ್ನು ಬಿಂಬಿಸುತ್ತದೆ. ಸಾಧನೆಗೆ ಪೂರಕ ವಿಚಾರಗಳ ಬಗ್ಗೆ ಪುಸ್ತಕ ಬೆಳಕು ಚೆಲ್ಲಲಿದೆ. ಮಾಚುರ ಮದ್ದ್, ಪೂಮಾಲೆ, ಯೋಗ, ನೀಡ ಗೇನತ್, ನಾಡ್ ರ ಪೆರ್ಮೆರ ಕುಂಞÂ, ಆ ಇರ್‌ಲ್ ನೇರತ್, ಪೂಮುಳ್ಳ್ರ ಬಾಳ್, ಸಾಧನೆರ ಬಟ್ಟೆಲ್ ಎಂಬ ಸಣ್ಣಕಥೆ ಒಳಗೊಂಡ ಪುಸ್ತಕ ಇದಾಗಿದೆ ಎಂದು ಮಾಹಿತಿ ನೀಡಿದರು.

ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಮಾತನಾಡಿ, ಕೊಡವ ಸಂಸ್ಕೃತಿ ಉಳಿವಿಗೆ ಆಟ್-ಪಾಟ್-ಪಡಿಪು ಕಾರ್ಯಕ್ರಮ, ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಪುಸ್ತಕ ಹೊರತಂದಿರುವ ಕೀರ್ತಿ ಕೊಡವ ಮಕ್ಕಡ ಕೂಟದ್ದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದ ಸಲಹೆಗಾರ ಕುಲ್ಲೇಟಿರ ಅಜಿತ್ ನಾಣಯ್ಯ ಉಪಸ್ಥಿತರಿದ್ದರು.