ಮಡಿಕೇರಿ, ಅ. ೨೬: ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರ ಆಶಯದಂತೆ ೨೦೨೧ನೇ ಸಾಲಿನ ರಾಜ್ಯೋತ್ಸವವನ್ನು ಕನ್ನಡಕ್ಕಾಗಿ ನಾವು ಎಂಬ ಶೀರ್ಷಿಕೆಯಡಿ ಅಭಿಯಾನವಾಗಿ ಆಚರಿಸಲು ಸರ್ಕಾರವು ಆದೇಶಿಸಿದ್ದು, ಇದರ ಅಂಗವಾಗಿ ರಾಜ್ಯಾದ್ಯಂತ ಕನ್ನಡದ ಶ್ರೇಷ್ಠತೆಯನ್ನು ಸಾರುವ ಕುವೆಂಪುರವರ ಬಾರಿಸುವ “ಕನ್ನಡ ಡಿಂಡಿಮವ”, ಡಾ. ಕೆ.ಎಸ್. ನಿಸಾರ್ ಅಹಮ್ಮದ್ ರವರ “ಜೋಗದ ಸಿರಿ ಬೆಳಕಿನಲ್ಲಿ” ಹಾಗೂ ಹಂಸಲೇಖರವರ ಹುಟ್ಟಿದರೆ “ಕನ್ನಡ ನಾಡಲ್ಲಿ ಹುಟ್ಟಬೇಕು” ಈ ಮೂರು ಹಾಡುಗಳನ್ನು ತಾ. ೨೮ ರಂದು ಬೆಳಿಗ್ಗೆ ೧೧ ಗಂಟೆಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಹಾಡಲು ವ್ಯವಸ್ಥೆಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರ ಮಾಡಬೇಕಾಗಿದೆ.

ಅದರಂತೆ, ತಾ. ೨೮ ರಂದು ಬೆಳಿಗ್ಗೆ ೧೧ ಗಂಟೆಗೆ ಸಾಮೂಹಿಕ ಗಾಯನವನ್ನು ನಗರದ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಒಂದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಕನ್ನಡ ಪರ ಸಂಘ ಸಂಸ್ಥೆಯ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಇದರೊಂದಿಗೆ ಜಿಲ್ಲಾದ್ಯಾಂತ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಏಕಕಾಲದಲ್ಲಿ ಕಾರ್ಯಕ್ರಮವನ್ನು ನಡೆಸಲು ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ನಿರ್ದೇಶಕರು ಮನವಿ ಮಾಡಿದ್ದಾರೆ.