ಮಡಿಕೇರಿ, ಅ. ೨೦: ಮಡಿಕೇರಿ ದಸರಾಕ್ಕೆ ಪ್ರತಿವರ್ಷದ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ಮೂಲಕ ಮೈಸೂರು ದಸರಾಕ್ಕೆ ಸಮಾನವಾಗಿ ಆಚರಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಮಡಿಕೇರಿ ದಸರಾ ದಶಮಂಟಪ ಸಮಿತಿಯ ಅಧ್ಯಕ್ಷ ಉಮೇಶ್ ಸುಬ್ರಮಣಿ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಡಿಕೇರಿ ದಸರಾಕ್ಕೆ ಸರ್ಕಾರ ಅಗತ್ಯ ಅನುದಾನ ನೀಡಿದರೆ ಮತ್ತಷ್ಟು ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಎಲ್ಲರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಮತ್ತು ಆರ್ಥಿಕವಾಗಿಯೂ ಜಿಲ್ಲೆ ಸದೃಢವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅರಸರು ಆರಂಭಿಸಿದ ಮೈಸೂರು ದಸರಾ ಸರ್ಕಾರದ ಆರ್ಥಿಕ ನೆರವಿ ನಿಂದ ವರ್ಷಂಪ್ರತಿ ವೈಭವವನ್ನು ಪಡೆದುಕೊಳ್ಳುತ್ತಿದ್ದು, ವಿಶ್ವ ವಿಖ್ಯಾತಿಯಾಗಿದೆ. ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾವನ್ನು ಕೂಡ ಕೊಡಗಿನ ಅರಸರೇ ಆರಂಭಿಸಿದ್ದು, ಜನರಿಂದಲೇ ಜನರಿಗಾಗಿ ಜನೋತ್ಸವ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ದಸರಾ ಆಚರಣೆ ಸಂದರ್ಭ ದಸರಾ ಸಮಿತಿ, ದಶಮಂಟಪ ಸಮಿತಿ, ಕರಗ ಸಮಿತಿ ಮತ್ತು ದೇವಾಲಯ ಸಮಿತಿಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಪ್ರತಿವರ್ಷ ಅನುದಾನಕ್ಕಾಗಿ ಸರ್ಕಾರದ ಎದುರು ಕೈಚಾಚುವ ಪರಿಸ್ಥಿತಿ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಡಿಕೇರಿ ದಸರಾ ಜನೋತ್ಸವದ ಮೆರುಗನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರದ ಸಹಾಯಹಸ್ತ ಅಗತ್ಯವಾಗಿದ್ದು, ಬಜೆಟ್‌ನಲ್ಲಿ ಕನಿಷ್ಟ ರೂ. ೨ ರಿಂದ ೩ ಕೋಟಿಗಳನ್ನು ಮೀಸಲಿಡಬೇಕು. ಹೀಗೆ ಹಣ ನೀಡುವುದ ರಿಂದ ಸರ್ಕಾರಕ್ಕೆ ಯಾವುದೇ ನಷ್ಟ ಉಂಟಾಗುವುದಿಲ್ಲ. ಬದಲಿಗೆ ವ್ಯಾಪಾರ, ವಹಿವಾಟು, ಪ್ರವಾಸೋದ್ಯಮದ ಮೂಲಕ ಆರ್ಥಿಕ ಕ್ರೋಢೀಕರಣವಾಗಲಿದೆ ಎಂದು ಉಮೇಶ್ ಸುಬ್ರಮಣಿ ತಿಳಿಸಿದ್ದಾರೆ.
ಸರ್ಕಾರ ಅನುದಾನವನ್ನು ಮೊದಲೇ ನಿಗದಿ ಮಾಡದಿದ್ದಲ್ಲಿ ಸಮಿತಿಗಳು ಕೊನೇ ಗಳಿಗೆಯಲ್ಲಿ ಅಸಹಾಯಕವಾಗಿ ದಸರಾ ಆಚರಣೆ ಹೇಗೆ ಎನ್ನುವ ಗೊಂದಲ ಸೃಷ್ಟಿಯಾಗುತ್ತದೆ. ಆದ್ದರಿಂದ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ಮೂಲಕ ಅರಸರ ಕಾಲದ ಮಡಿಕೇರಿ ದಸರಾಕ್ಕೂ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದ್ದಾರೆ.