ಶನಿವಾರಸಂತೆ, ಅ. ೨೦: ಅರಣ್ಯ ಹಕ್ಕು ಕಾಯ್ದೆ ಲೋಪ-ದೋಷಗಳ ತಿದ್ದುಪಡಿ ಮಾಡಿ, ಅರಣ್ಯದ ಬುಡಕಟ್ಟು ಜನ ಹಾಗೂ ಪಾರಂಪರಿಕ ಅರಣ್ಯ ವಾಸಿಗಳೆಂದು ತಿದ್ದುಪಡಿಯಲ್ಲಿ ವಿಂಗಡಣೆ ಮಾಡಲಾಗಿದ್ದು, ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕಾಯಿದೆ ಜಾರಿಗೆ ತಂದಿದ್ದಾರೆ ಎಂದು ವಕೀಲ ಎಂ.ಎನ್. ಶಂಕರ್ ಹೇಳಿದರು.

ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ ನ್ಯಾಯ ನಿಮ್ಮದು - ನೆರವು ನಮ್ಮದು ಎಂಬ ಅರಣ್ಯ ಹಕ್ಕು ಕಾಯಿದೆ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಯಿದೆಯ ಸೌಲಭ್ಯ ಪಡೆಯಲು ಹಲವು ನಿಯಮಗಳಿದ್ದು, ಅರಣ್ಯದಲ್ಲಿ ವಾಸಿಸಲು ಹಲವು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಹಕ್ಕು ಪತ್ರ ಪಡೆದವರಿಗೆ ಅಲ್ಲಿ ಮೂಲ ಸೌಲಭ್ಯ ಒದಗಿಸಲಾಗುವುದು. ರಸ್ತೆ, ಚರಂಡಿ, ಕುಡಿಯುವ ನೀರು, ಸಮುದಾಯ ಭವನ ಇತ್ಯಾದಿ ಸೌಲಭ್ಯಗಳನ್ನು ಸರ್ಕಾರ ಒದಗಿಸಿಕೊಡುತ್ತದೆ. ಕೇಂದ್ರ ಸರ್ಕಾರ ಅರಣ್ಯ ವಾಸಿಗಳು ಮತ್ತು ಪಾರಂಪರಿಕ ಅರಣ್ಯ ವಾಸಿಗಳಲ್ಲಿ ಸರಿಯಾದ ದಾಖಲಾತಿ ಇದ್ದವರಿಗೆ ಹಕ್ಕು ಪತ್ರ ನೀಡಲು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು, ಉಪ ಸಮಿತಿ ರಚಿಸಲಾಗಿದೆ. ಸಮಿತಿಯ ಪರಿಶೀಲನಾ ಕಾರ್ಯಪ್ರಗತಿಯಲ್ಲಿದೆ ಎಂದರು.

ಪAಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ ಮಾತನಾಡಿ, ಅರಣ್ಯವಾಸಿಗಳಿಂದ ಕಂದಾಯ ವಸೂಲಿಯಾಗುತ್ತಿದೆ. ಆದರೆ, ಅಭಿವೃದ್ಧಿಗಾಗಿ ಪಂಚಾಯಿತಿಯ ಅನುಮತಿ ಇಲ್ಲ. ಸಮಿತಿ ರಚನೆಯಾಗಿದ್ದು, ಅವರ ಬಗ್ಗೆ ಕುರುಹುಗಳನ್ನು ಗುರುತಿಸಿ, ಸಮಿತಿಯಿಂದ ಹಕ್ಕು ಪತ್ರ ನೀಡಲಾಗುವುದು ಎಂದರು. ಪಂಚಾಯಿತಿ ಅಧ್ಯಕ್ಷೆ ಸರೋಜ ಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸದಸ್ಯರು, ಸಿಬ್ಬಂದಿ ಸಂಜೀವಿನಿ, ಸಮಿತಿ ಅಧ್ಯಕ್ಷೆ ಚಂದ್ರಕಲಾ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.