ಕೂಡಿಗೆ, ಅ. ೧೮: ಹೊಸ ದೇಶೀಯ ಹಸುಗಳ ಸಾಕಾಣಿಕೆಗೆ ರಾಜ್ಯ ಸರಕಾರ ಮುಂದಾಗಿದ್ದು, ಇದರ ಯೋಜನೆ ಅನುಗುಣವಾಗಿ ರಾಜ್ಯ ಸರ್ಕಾರದ ಪಶುಪಾಲನಾ ಇಲಾಖೆಯ ವತಿಯಿಂದ ಕೂಡಿಗೆಯ ಜರ್ಸಿ ತಳಿ ಸಂವರ್ಧನ ಕೇಂದ್ರದಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ದೇಶೀಯ ಹಸುಗಳಾದ ಹರಿಯಾಣ ಮೂಲದ ಸಾಹಿವಾಲ್ ಹಸುಗಳನ್ನು ಸಾಕಾಣಿಕೆ ಮಾಡುವ ಕಾರ್ಯ ಆರಂಭವಾಗಿದೆ.
ರಾಜ್ಯ ಪಶುಪಾಲನಾ ಇಲಾಖೆಯ ಸೂಚನೆ ಮೇರೆಗೆ ರಾಜ್ಯಮಟ್ಟದ ಅಧಿಕಾರಿಗಳ ತಂಡ ಹರಿಯಾಣ, ರಾಜಸ್ಥಾನ, ಪಂಜಾಬ್ ರಾಜ್ಯಗಳ ಮೂಲದ ದೇಶೀಯ ಸ್ಥಳೀಯ ಹಸುಗಳನ್ನು ಖರೀದಿಸಲು ಸ್ಥಳಕ್ಕೆ ಹೋಗಿ ಪರಿಕ್ಷೀಸಿ, ನಂತರ ರೋಗ ರಹಿತ ಸ್ಥಳೀಯ ಹಸುಗಳನ್ನು ಇಲಾಖೆಯ ಸೂಚನೆಯಂತೆ ಖರೀದಿಸಿ ಅಲ್ಲಿಂದ ಕೂಡಿಗೆಯ ಪಶುಪಾಲನಾ ಇಲಾಖೆಯ ಅಧೀನದಲ್ಲಿರುವ ಜರ್ಸಿ ತಳಿ ಸಂವರ್ಧನ ಕೇಂದ್ರಕ್ಕೆ ತರಲಾಗಿದ್ದು, ಸಾಕಾಣಿಕೆಯ ಕಾರ್ಯ ಆರಂಭವಾಗಿದೆ.
ಪಶುಪಾಲನಾ ಇಲಾಖೆಯ ಹೊಸ ಯೋಜನೆಯಾದ ಗೋ ಸಂಕುಲ ಸಮೃದ್ಧಿ ಯೋಜನೆ ಯಡಿಯಲ್ಲಿ ಸರಕಾರ ನಿಗದಿಪಡಿಸಿದಂತೆ ದೇಶೀಯ ತಳಿಯ ೧೦ ಹಸುಗಳನ್ನು, ಒಂದು ಹಸುವಿಗೆ ರೂ. ೯೫ ಸಾವಿರದಿಂದ ಒಂದು ಲಕ್ಷ ನೀಡಿ ಖರೀದಿ ಮಾಡಲಾಗಿದೆ.
ಇವುಗಳಲ್ಲಿ ೬ ಗರ್ಭಧಾರಣೆ ಯಾಗಿರುವ ಹಸು ಮತ್ತು ನಾಲ್ಕು ಹಾಲು ಕರೆಯುವ ಹಸುಗಳಿವೆ. ಈಗಾಗಲೇ ಬಂದಿರುವ ಹಸುಗಳಿಗೆ ಸಮರ್ಪಕವಾದ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಅಲ್ಲದೆ ಕೂಡಿಗೆ ಕೇಂದ್ರದಲ್ಲಿ ಹಸು ಸಾಕಾಣಿಕೆಗೆ ಬೇಕಾಗುವ ಎಲ್ಲಾ ವ್ಯವಸ್ಥೆ ಇದೆ ಎಂದು ಕೂಡಿಗೆ ಜರ್ಸಿ ತಳಿ ಸಂವರ್ಧನ ಕೇಂದ್ರದ ನಿರ್ದೇಶಕ ಡಾ. ವಿ. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಈ ಹಸುಗಳು ಉತ್ತಮ ಗುಣಮಟ್ಟದ ಹಾಲು ನೀಡುವುದರ ಜೊತೆಗೆ ಅರೆ ಮಲೆನಾಡು ಪ್ರದೇಶದ ಹವಮಾನಕ್ಕೆ ಹೊಂದಿಕೊಳ್ಳುವ ದೇಶೀಯ ಹಸುಗಳಾಗಿರುತ್ತವೆ. ಪ್ರಮುಖವಾಗಿ ಗಂಡು ಕರುಗಳನ್ನು ಬೆಳೆವಣಿಗೆ ಮಾಡಿ ಉತ್ತಮವಾಗಿ ಸಾಕಿ ನಂತರ ಅದರ ವೀರ್ಯಾಣುವನ್ನು ಬೆಂಗಳೂರು ಹೆಸರುಗಟ್ಟದ ವೀರ್ಯಾಣು ತಳಿ ಸಂಗ್ರಹ ಕೇಂದ್ರಕ್ಕೆ ಕಳುಹಿಸುವ ಯೋಜನೆ ಇದೆ.
ಅದರ ಮುಖೇನ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಇರುವ ಪಶುಪಾಲನಾ ಇಲಾಖೆಯ ಹಸುಗಳ ಸಾಕಾಣಿಕೆ ಕೇಂದ್ರದಲ್ಲಿ ದೇಶೀಯ ಹಸುಗಳನ್ನು ಸಾಕುವ ಯೋಜನೆಗೆ ಒತ್ತು ನೀಡುವ ನಿಟ್ಟಿನ ಅಭಿವೃದ್ಧಿ ಕಾರ್ಯ ಆಗಬೇಕಾಗಿದ್ದು, ಸಿದ್ಧತೆಗಳಾಗುತ್ತಿವೆ.
ಜಿಲ್ಲೆಯಲ್ಲಿ ಹೈನುಗಾರಿಕೆ ಯೋಜನೆ ಅಭಿವೃದ್ಧಿಪಡಿಸುವ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ರೈತರಿಗೆ ಅಮೃತ ಸಿರಿ ಯೋಜನೆಯ ಅಡಿಯಲ್ಲಿ ಸಾಹಿ ವಾಲ್ ಹಸುಗಳು ಪ್ರಗತಿ ಹೊಂದಿದ ನಂತರ ನೀಡುವ ಯೋಜನೆ ಇದೆ ಎಂದು ಡಾ. ವಿ. ಕೃಷ್ಣಮೂರ್ತಿ ತಿಳಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.