ಕಣಿವೆ, ಅ. ೧೮: ಮುಳ್ಳುಸೋಗೆ ಗ್ರಾಮದಲ್ಲಿನ ರಾಜ್ಯ ಹೆದ್ದಾರಿಯಂಚಿನ ಕಾವೇರಿ ನದಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕಸ ಹಾಗೂ ತ್ಯಾಜ್ಯದಿಂದ ತುಂಬಿ ತುಳುಕಿ ಗಬ್ಬೆದ್ದು ನಾರುತ್ತಿದೆ.

ಇದರಿಂದಾಗಿ ರಸ್ತೆಯ ತಡೆಗೋಡೆಗೆ ಹೊಂದಿಕೊAಡಿರುವ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಕೇವಲ ಮಕ್ಕಳಷ್ಟೇ ಅಲ್ಲ ಶಾಲಾ ಶಿಕ್ಷಕರು ಕೂಡ ಸಾಂಕ್ರಾಮಿಕದ ಆತಂಕದಲ್ಲಿ ದಿನಗಳೆಯುವಂತಾಗಿದೆ. ಹಾಗಿದ್ದರೂ ಕೂಡ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಯಾವುದೇ ಕ್ರಮಕ್ಕೂ ಮುಂದಾಗದೇ ಮಂದಗತಿ ಅನುಸರಿಸಿದೆ.

ಕಾವೇರಿ ನದಿಗೆ ಸಂಪರ್ಕ ಕಲ್ಪಿಸುವ ಈ ಕಸ ತುಂಬಿದ ರಸ್ತೆಗೆ ಸ್ಥಳೀಯ ಗ್ರಾಮ ನಿವಾಸಿಗಳು ನಿತ್ಯವೂ ಇಲ್ಲಿ ಕಸ ಸುರಿದು ಮಲಿನ ಮಾಡುತ್ತಿದ್ದಾರೆ. ಅಷ್ಟೇಅಲ್ಲ ಇಲ್ಲಿನ ತರಕಾರಿ ಮಳಿಗೆಗಳ ಕೊಳೆತ ತ್ಯಾಜ್ಯಗಳನ್ನು ಇಲ್ಲಿ ತಂದು ಬಿಸಾಕುತ್ತಿರುವ ಕಾರಣ ಇಲ್ಲಿನ ಪರಿಸರ ಸಂಪೂರ್ಣ ಕಲುಷಿತವಾಗುತ್ತಿದೆ.

ಇದರಿಂದಾಗಿ ಮನುಷ್ಯನ ಆರೋಗ್ಯಕ್ಕೆ ಮಾರಕವಾದ ನೊಣಗಳು, ಭಯಾನಕ ಸೊಳ್ಳೆಗಳು ಇಲ್ಲಿ ತಾಂಡವವಾಡುತ್ತಿವೆ. ಅಷ್ಟು ಮಾತ್ರವಲ್ಲ ಮಾರಕವಾದ ಸೊಳ್ಳೆ ಹಾಗೂ ನೊಣಗಳು ಗುಯ್ ಗುಡುತ್ತಾ ಶಾಲೆಯ ಕೊಠಡಿಗಳ ಒಳಕ್ಕೂ ಧಾವಿಸುತ್ತಿದ್ದು ಮಕ್ಕಳು ಹಾಗೂ ಬೋಧಕರ ನೆಮ್ಮದಿಗೆ ಭಂಗ ತರುತ್ತಿವೆ. ಈ ಕಸ - ತ್ಯಾಜ್ಯದ ದುರ್ವಾಸನೆ ಹಾಗೂ ಕ್ರಿಮಿಕೀಟಗಳ ಬಾಧೆಯನ್ನು ನಿಯಂತ್ರಿಸಬೇಕು. ಶಾಲೆಯ ತಡೆಗೋಡೆಯ ಬಳಿ ಕಸವನ್ನು ಸುರಿಯದಂತೆ ಕ್ರಮ ವಹಿಸಬೇಕೆಂದು ಶಾಲಾ ಶಿಕ್ಷಕರು ಸ್ಥಳೀಯ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಕೊನೆಗೆ ಬೇಸತ್ತ ಶಾಲಾ ಶಿಕ್ಷಕರು ಶಾಲೆಯ ತಡೆಗೋಡೆ ಕಡೆಯ ಕಿಟಕಿಗಳನ್ನೇ ತೆರೆಯುತ್ತಿಲ್ಲ. ಹಾಗಾಗಿ ಮಕ್ಕಳು ಹಾಗೂ ಶಿಕ್ಷಕರು ಕತ್ತಲೆಯ ಕೋಣೆಯಲ್ಲಿಯೇ ಪಾಠ ಪ್ರವಚನಗಳಲ್ಲಿ ತೊಡಗಿದ್ದಾರೆ.

ಈ ಶಾಲೆಯ ಪರಿಸರದ ಕೊಳಕು ವಾತಾವರಣದಿಂದಾಗಿ ಶಾಲೆಯ ಮಕ್ಕಳು ನೊಣ ಹಾಗೂ ಸೊಳ್ಳೆಗಳ ಕಾಟದಿಂದಾಗಿ ಮಧ್ಯಾಹ್ನದ ಊಟವನ್ನೇ ತೊರೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನಾದರೂ ಸ್ಥಳೀಯ ಗ್ರಾಮ ಪಂಚಾಯಿತಿ ಇಲ್ಲಿನ ಶಾಲಾ ಪರಿಸರ ಹಾಗೂ ನದಿಯ ರಸ್ತೆಯನ್ನು ಕಸ ಹಾಗೂ ತ್ಯಾಜ್ಯ ಮುಕ್ತವಾಗಿ ಮಾಡಲು ಗಂಭೀರವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಶಾಲಾ ಪೋಷಕ ವರ್ಗ ಆಗ್ರಹಿಸಿದೆ.

ಇಲ್ಲಿ ಕಸ ಸುರಿದು ಸುಂದರ ಪರಿಸರ ಕಲುಷಿತ ಗೊಳಿಸುತ್ತಿರುವ ದುರುಳ ದುರ್ಜನರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸದೇ ಅನ್ಯ ಮಾರ್ಗವೇ ಇಲ್ಲ.