ಗೋಣಿಕೊಪ್ಪಲು, ಅ. ೧೮: ಗೋಣಿಕೊಪ್ಪಲುವಿನ ಬೈಪಾಸ್ ರಸ್ತೆಯ ಬಳಿ ಇರುವ ಕೈತೋಡುವನ್ನು ಕೆಲವರು ಅತಿಕ್ರಮಣ ಮಾಡಿಕೊಂಡು ತೋಡಿಗೆ ಸೇರಿಸಿ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಒತ್ತುವರಿದಾರರಿಗೆ ತಾಲೂಕು ತಹಶೀಲ್ದಾರರು ನೋಟೀಸ್ ಜಾರಿಗೊಳಿಸಿದ್ದಾರೆ. ಕೈ ತೋಡನ್ನು ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಗಳು ತಮ್ಮ ಜಾಗದ ದಾಖಲೆಗಳನ್ನು ಖುದ್ದಾಗಿ ೧೪ ದಿನದ ಒಳಗೆ ತಾಲೂಕು ತಹಶೀಲ್ದಾರರಿಗೆ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಕೀರೆ ಹೊಳೆಯನ್ನು ಸೇರುವ ಈ ಕೈ ತೋಡನ್ನು ೨೫ಕ್ಕೂ ಅಧಿಕ ಮಂದಿ ಒತ್ತುವರಿ ಮಾಡಿಕೊಂಡಿದ್ದರು. ಇದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಅನಾಹುತಗಳು ಸಂಭವಿಸಿದ್ದವು. ವಿಶಾಲವಾಗಿ ಹರಿಯುತ್ತಿರುವ ಕೀರೆಹೊಳೆ ಹಾಗೂ ಬೈಪಾಸ್ ಕೈತೋಡನ್ನು ಅತಿಕ್ರಮಿಸಿಕೊಂಡು ಈ ಜಾಗಕ್ಕೆ ಸಮೀಪದ ಸರ್ವೆ ನಂಬರ್ ತೋರಿಸುವ ಮೂಲಕ ಅಧಿಕಾರಿಗಳನ್ನು ದಾರಿತಪ್ಪಿಸಿ ನಿವೇಶನ ಮಾಡಿಕೊಂಡು ಈ ನಿವೇಶನವನ್ನು ಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಜಾಗದಲ್ಲಿ ಬೃಹತ್ ಕಟ್ಟಡ ಕಟ್ಟುವ ಮೂಲಕ ಹೊಳೆಯ ಜಾಗವನ್ನು ಹೆಚ್ಚಾಗಿ ಬಳಸಿಕೊಂಡಿದ್ದ ಆರೋಪಗಳಿವೆ.
ಇದರಿಂದ ತೋಡು ಮತ್ತು ನದಿಪಾತ್ರ ಕಿರಿದಾಗುತ್ತ ನೀರು ಸರಾಗವಾಗಿ ಹರಿಯಲು ನೀರು ಮುನ್ನುಗ್ಗಲು ಆಗದೆ ಸುರಕ್ಷಿತವಾಗಿದ್ದ ದಡದ ಮನೆಗಳಿಗೂ ನೀರು ನುಗ್ಗುತ್ತಿತ್ತು. ಪಟ್ಟಣದ ಬಹುತೇಕ ಬಡಾವಣೆಗಳು ಪ್ರವಾಹದಿಂದ ಸಂಪೂರ್ಣ ಮುಚ್ಚಿ ಹೋಗಿರುವುದಕ್ಕೆ ಇದೇ ಪ್ರಮುಖ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಿಲ್ಲಾಡಳಿತ ಗಮನ ಸೆಳೆದಿದ್ದರು. ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ್ ಈ ಬಗ್ಗೆ ಸ್ಥಳ ಪರಿಶೀಲಿಸಿ ಸರ್ವೆ ಕಾರ್ಯ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಎರಡು ದಿನಗಳ ಕಾಲ ಕೈತೋಡನ್ನು ಸರ್ವೆ ನಡೆಸಿ ಅಧಿಕಾರಿಗಳು ವರದಿಯನ್ನು ತಾಲೂಕು ತಹಶೀಲ್ದಾರರಿಗೆ ನೀಡಿದ್ದರು. ಸರ್ವೆ ಕಾರ್ಯ ನಡೆಸುವ ವೇಳೆ ಕೈ ತೋಡನ್ನು ಒತ್ತುವರಿ ಮಾಡಿದ ಬಗ್ಗೆ ದೃಢಪಟ್ಟಿತ್ತು.
-ಹೆಚ್.ಕೆ. ಜಗದೀಶ್