ಮಡಿಕೇರಿ, ಅ. ೧೬: ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಲಿ ಎಂಬ ಉದ್ದೇಶ ದಿಂದ ಹಾಪ್‌ಕಾಮ್ಸ್ ನಿರ್ಮಾಣ ಮಾಡಲಾಗಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೊಡಗು ಜಿಲ್ಲಾ ಹಾಪ್ ಕಾಮ್ಸ್, ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳ ಇವರ ಸಹಯೋಗದೊಂದಿಗೆ ಶನಿವಾರ ನಗರದ ಮುಖ್ಯ ರಸ್ತೆಯಲ್ಲಿ ನಿರ್ಮಿಸಿರುವ ಹಾಪ್‌ಕಾಮ್ಸ್ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಡಿಕೇರಿ ನಗರದ ಹೃದಯ ಭಾಗದಲ್ಲಿ ಹಾಪ್‌ಕಾಮ್ಸ್ ಕಟ್ಟಡ ನಿರ್ಮಾಣ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ರೈತರು ಅವಶ್ಯಕವಾಗಿ ಇದರ ಸದ್ಬಳಕೆ ಮಾಡಿ ಕೊಳ್ಳುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೃಷಿ ಸಮ್ಮಾನ್ ಯೋಜನೆಯು ಹಲವಾರು ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದೆ. ಅದರ ಸದುಪಯೋಗವನ್ನು ಎಲ್ಲಾ ರೈತರು ಪಡೆದುಕೊಳ್ಳು ವಂತಾಗಬೇಕು ಎಂದರು.
ಶಾಸಕ ಕೆ.ಜಿ. ಬೋಪಯ್ಯ ಅವರು ಮಾತನಾಡಿ, ರೈತರು ಬೆಳೆದ ಬೆಳೆಗೆ ರೈತರೇ ದರ ನಿಗದಿ ಮಾಡುವಂತಾ ಗಬೇಕು. ಯಾವ ಮೂಲದಿಂದಲೂ ಅವರಿಗೆ ನಷ್ಟ
(ಮೊದಲ ಪುಟದಿಂದ) ಆಗಬಾರದು. ಜಿಲ್ಲಾ ಹಾಪ್‌ಕಾಮ್ಸ್ನಲ್ಲಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯು ಆದಷ್ಟು ಬೇಗ ಆಗಬೇಕು ಎಂದು ಹೇಳಿದರು. ಪ್ರಧಾನ ಮಂತ್ರಿಯವರ ಕೃಷಿಯೆಡೆಗಿನ ಚಿಂತನೆಗಳು ಅತ್ಯಮೂಲ್ಯವಾಗಿದೆ ಎಂದು ನೆನಪಿಸಿಕೊಂಡರು.
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಮಾತನಾಡಿ, ಸರ್ಕಾರದ ವ್ಯವಸ್ಥೆಯಲ್ಲಿ ಶ್ರಮವಹಿಸಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಎಲ್ಲಾ ರೈತರು ಕಟ್ಟಡದ ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದು ಹೇಳಿದರು.
ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ಎ.ರಮೇಶ್ ಚಂಗಪ್ಪ ಅವರು ಮಾತನಾಡಿ ಹಾಪ್‌ಕಾಮ್ಸ್ ಕಟ್ಟಡ ನಿರ್ಮಾಣವು ೨೦ ವರ್ಷಗಳ ಕನಸಾಗಿತ್ತು, ಬಹಳಷ್ಟು ಶ್ರಮವಹಿಸಿ ಕಟ್ಟಡ ನಿರ್ಮಾಣ ಮಾಡಲಾಯಿತು. ಎಲ್ಲರಿಗೂ ಇದರ ಉತ್ತಮ ಸೇವೆ ತಲುಪುವಂತಾಗಲಿ ಎಂದು ಹಾರೈಸಿದರು.
ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳದ ಅಧ್ಯಕ್ಷ ಡಾ. ಬಿ.ಡಿ. ಭೂಕಾಂತ್ ಮಾತನಾಡಿ ಕೊಡಗಿನ ಕಿತ್ತಳೆ ಒಂದು ಉತ್ತಮ ಬೆಳೆಯಾಗಿದೆ, ಅದಕ್ಕೆ ಉತ್ತಮ ದರ ನಿಗದಿಪಡಿಸಿ ನ್ಯಾಯ ಒದಗಿಸಿಕೊಡಬೇಕು ಎಂದರು.
ರಾಜ್ಯದಲ್ಲಿ ೨೩ ಹಾಪ್ ಕಾಮ್ಸ್ಗಳಿದ್ದು, ೧೧ ಹಾಪ್‌ಕಾಮ್ಸ್ಗಳಿಗೆ ಮೊಬೈಲ್ ವಾಹನದ ವ್ಯವಸ್ಥೆಯಿರುತ್ತದೆ. ಕೊಡಗು ಜಿಲ್ಲೆಗೂ ಸಹ ಆದಷ್ಟು ಬೇಗ ಮೊಬೈಲ್ ವಾಹನದ ವ್ಯವಸ್ಥೆ ಸಿಗುವಂತಾಗಲಿ ಎಂದು ಹಾರೈಸಿದರು.
ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳದ ಉಪಾಧ್ಯಕ್ಷ ಸೂರ್ಯಕುಮಾರ್, ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳದ ವ್ಯವಸ್ಥಾಪಕ ನಿರ್ದೇಶಕಿ ಎಚ್.ಎನ್. ಹೇಮ, ಮಡಿಕೇರಿ ಸಹಕಾರ ಇಲಾಖೆಯ ಉಪ ನಿಬಂಧಕರಾದ ಬಿ.ಕೆ.ಸಲೀಂ, ಜಿಲ್ಲಾ ಹಾಪ್ ಕಾಮ್ಸ್ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು ಗಳಾದ ಎಸ್.ಪಿ. ಪೊನ್ನಪ್ಪ, ಬೇಬಿ ಪೂವಯ್ಯ, ಲೀಲಾ ಮೇದಪ್ಪ, ಕೋಣೇರಿರ ಎಂ. ಮನೋಹರ್, ಎಂ.ಡಿ. ಸುವಿನ್ ಗಣಪತಿ, ಪಾಡಿಯಮ್ಮನ ಎ. ಮಹೇಶ್, ಕೆ. ಪೂವಪ್ಪ ನಾಯ್ಕ, ಡಿ.ಹೆಚ್. ಉಮೇಶ್ ರಾಜ್ ಅರಸ್, ಎಚ್.ಎಂ. ಸುಧೀರ್, ಬಿ.ಎ. ಹರೀಶ್, ಸತೀಶ್ ಕಾಂಗೀರ ಎನ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಮೋದ್ ಸಿ.ಎಂ, ಹಾಪ್ ಕಾಮ್ಸ್ ಮುಖ್ಯ ಕಾರ್ಯನಿರ್ವಾಹಕ ಗಿರೀಶ್, ಹಾಪ್ ಕಾಮ್ಸ್ನ ಮಾರಾಟ ಸಹಾಯಕ ಮಹಾಲಿಂಗೇಗೌಡ ಎಲ್, ಡಿಸಿಸಿ ಬ್ಯಾಂಕ್‌ನ ಮನುಮುತ್ತಪ್ಪ ಇತರರು ಪಾಲ್ಗೊಂಡಿದ್ದರು.
ಆರ್. ಮಂಜುಳ ಪ್ರಾರ್ಥಿಸಿ, ನಿರೂಪಿಸಿದರು, ನಾಗೇಶ್ ಕುಂದಲ್ಪಾಡಿ ಸ್ವಾಗತಿಸಿದರು, ಮಧು ದೇವಯ್ಯ ವಂದಿಸಿದರು.