ಮಡಿಕೇರಿ, ಅ. ೧೬: ಮಡಿಕೇರಿ ನಗರದ ದೇವಾಲಯವೊಂದರಲ್ಲಿ ಆಯುಧ ಪೂಜೆಯ ದಿನದಿಂದ ಜನದಟ್ಟಣೆ ಅಧಿಕವಿದ್ದ ಸಂದರ್ಭ ಮಹಿಳೆಯೋರ್ವರ ಚಿನ್ನದ ಸರ ನಾಪತ್ತೆಯಾಗಿದೆ. ಭಕ್ತರ ಸೋಗಿನಲ್ಲಿ ದೇವಾಲಯಕ್ಕೆ ಬಂದಿದ್ದ ನಾಲ್ವರು ಮಹಿಳೆಯರ ಕೈಚಳಕ ಇದಾಗಿದೆ ಎನ್ನಲಾಗಿದ್ದು, ಇದು ಸಿಸಿ ಟಿವಿಯಲ್ಲಿ ಗೋಚರವಾಗಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪರಿಶೀಲನೆ ನಡೆಯುತ್ತಿದೆ.
ನಗರದ ಪೆನ್ಶನ್ಲೇನ್ ನಿವಾಸಿ ಮೀನಾಕ್ಷಿ ಎಂಬವರು ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಪೂಜೆಗೆ ಬಂದಿದ್ದ ಸಂದರ್ಭ ಭಕ್ತರ ಸಂಖ್ಯೆ ಅಧಿಕವಿತ್ತು. ತೀರ್ಥ ಪ್ರಸಾದ ಸ್ವೀಕಾರ ಸಂದರ್ಭ ಇವರ ಸುತ್ತಲು ನಿಂತುಕೊAಡಿದ್ದ ನಾಲ್ವರು ಮಹಿಳೆಯರು ಭಕ್ತೆಯ ಕೊರಳಿನಲ್ಲಿದ್ದ ಬೆಲೆ ಬಾಳುವ ಚಿನ್ನದ ಸರವನ್ನು ಲಪಟಾಯಿಸಿ ಬಳಿಕ ರಾಜಾಸೀಟು ಕಡೆಯತ್ತ ತೆರಳಿದ್ದಾರೆ.
ಇವರ ನಡವಳಿಕೆಯ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಮಾಸ್ಕ್ ಹಾಗೂ ವೇಲ್ ಧರಿಸಿದ್ದರಿಂದ ಯಾರೆಂದು ಸುಲಭಕ್ಕೆ ತಿಳಿಯದಾಗಿದೆ. ಒಬ್ಬ ಮಹಿಳೆ ಮಗುವೊಂದನ್ನು ಎತ್ತಿಕೊಂಡಿದ್ದರೆನ್ನಲಾಗಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ನೀಡಲಾಗಿರುವ ದೂರಿನಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ತಾ. ೧೪ ರಂದು ನಡೆದಿದೆ. ಇದಲ್ಲದೆ ತಾ. ೧೩ ರಂದು ಕೂಡ ಮತ್ತೋರ್ವ ಮಹಿಳೆಯೊಬ್ಬರ ಸರ ನಾಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು, ಇವರು ಸರ ಎಲ್ಲೋ ಬಿದ್ದು ಹೋಗಿರಬಹುದು ಎಂದು ಸುಮ್ಮನಾಗಿ ದ್ದಾರೆ. ಇದೀಗ ಈ ಬಗ್ಗೆಯೂ ಸಂಶಯ ವ್ಯಕ್ತಗೊಂಡಿದೆ.